ಮುಖ್ಯಮಂತ್ರಿಗಳು ತಕ್ಷಣವೇ ರಾಜೀನಾಮೆ ನೀಡಬೇಕು-ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು, ಜು.15- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿಎಂ ಸ್ಥಾನದ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 16 ಮಂದಿ ಶಾಸಕರು ಈ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಬಹುಮತ ಕಳೆದುಕೊಂಡೇ ಅನೇಕ ದಿನಗಳಾಗಿವೆ. ಕೂಡಲೇ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅದಕ್ಕೊಂದು ಗೌರವ ಬರುತ್ತದೆ ಎಂದು ಹೇಳಿದರು.

ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿಯಾಗಲು ಬಂದರೆ ಅವರನ್ನು ಭೇಟಿ ಮಾಡದೆ ಅಪಮಾನಿಸಿದ್ದಾರೆ.

ಪ್ರತಿ ಯೊಂದರಲ್ಲೂ ಹಸ್ತಕ್ಷೇಪ ನಡೆಸಿರುವುದನ್ನು ಶಾಸಕರು ಬಹಿರಂಗ ಪಡಿಸಿದ್ದಾರೆ. ಈಗ ಮುಂಬೈಗೆ ಹೋಗಿ ಗೋಗರೆದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಮಹಾಘಟ್‍ಬಂಧನ್ ಮೂಲಕ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಬಾಗಿಲು ಮುಚ್ಚುವುದಾಗಿ ಕೆಲವರು ಹೇಳಿದ್ದರು. ಮಹಾಘಟ್‍ಬಂಧನ್ ವೈಫಲ್ಯ ಕರ್ನಾಟಕದಿಂದಲೇ ಆರಂಭವಾಗಿದೆ.ಸಮ್ಮಿಶ್ರ ಸರ್ಕಾರದ ವೈಫಲ್ಯಕ್ಕೆ ಇದು ತಾಜಾ ಉದಾಹರಣೆ ಎಂದು ಹೇಳಿದರು.

ಅಸಮಾಧಾನ:
ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅವರು ಅಸಂವಿಧಾನಿಕವಾಗಿ ಮಾತನಾಡಿದ್ದಾರೆ. ನಾನು ನೃತ್ಯಗಾರ್ತಿಯಲ್ಲ ಎಂದು ಹೇಳಿರುವುದು ಇಡೀ ನೃತ್ಯಗಾರ್ತಿ ಸಮುದಾಯಕ್ಕೆ ಮಾಡಿದ ಅಪಮಾನ. ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಕೂಡಲೇ ಅವರು ಕ್ಷಮೆಯಾಚಿಸಬೇಕೆಂದು ಶೋಭಾ ಒತ್ತಾಯಿಸಿದರು.

ಸ್ಪೀಕರ್ ಸ್ಥಾನದಲ್ಲಿ ಕುಳಿತು ಇಂತಹ ಪದಗಳನ್ನು ಬಳಸುವುದು ಸರಿಯಲ್ಲ. ಕಳೆದ ಬಾರಿ ಅದೇ ಪೀಠದಲ್ಲಿ ಕುಳಿತು ವೇಷ್ಯೆಯರ ಬಗ್ಗೆ ಮಾತನಾಡಿದ್ದರು. ಈಗ ನಾನು ನೃತ್ಯಗಾರ್ತಿಯಲ್ಲ ಎಂದು ಹೇಳುತ್ತಿದ್ದಾರೆ. ನೃತ್ಯಗಾರ್ತಿಯರು ಎಂದರೆ ಕಥಕ್ಕಳಿ, ಭರತನಾಟ್ಯದ ಮೂಲಕ ದೇವರನ್ನು ಒಲಿಸಿಕೊಳ್ಳುವ ಸಾರ್ಥಕತೆಯನ್ನು ಪಡೆದುಕೊಂಡವರು. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ನೀವು ಸ್ಪೀಕರ್ ಸ್ಥಾನದಲ್ಲಿ ಕುಳಿತಿರುವುದನ್ನು ಮರೆಯಬಾರದು. ನಿಮ್ಮ ಪೀಠದ ಮೇಲೆ ಸಿಂಹದ ಲಾಂಛನವಿದೆ ಎಂಬುದನ್ನು ಮರೆಯಬೇಡಿ, ಹಿರಿಯರ ಬಗ್ಗೆ ಇಂತಹ ಕೀಳು ಅಭಿರುಚಿ ಸರಿಯಲ್ಲ ಎಂದು ಶೋಭಾಕರಂದ್ಲಾಜೆ ಕಿಡಿಕಾರಿದರು.

ಸ್ಪೀಕರ್ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು. ಆದರೆ, ಇವರು ಕಾಂಗ್ರೆಸ್ ಏಜೆಂಟರಂತೆ ವರ್ತನೆ ಮಾಡುತ್ತಾರೆ. ಸ್ಪೀಕರ್ ಸ್ಥಾನದ ಘನತೆಯನ್ನು ಎತ್ತಿಹಿಡಿಯಿರಿ ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ