ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ಪಕ್ಷಗಳಿಂದ ಅಂತಿಮ ಕಸರತ್ತು

ಬೆಂಗಳೂರು, ಜು.15-ಪವಾಡ ನಡೆಸಿಯಾದರೂ ಸರಿ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಅಂತಿಮ ಕ್ಷಣದಲ್ಲಿ ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿವೆ.

ಸದ್ಯದ ಸಂಖ್ಯಾಬಲದ ಪ್ರಕಾರ ಸಮ್ಮಿಶ್ರ ಸರ್ಕಾರ ಉಳಿದುಕೊಳ್ಳುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಅದಕ್ಕೆ ತಕ್ಕಂತೆ ಬಿಜೆಪಿ ರಾಜಕೀಯವಾಗಿ ಅತ್ಯಂತ ಎಚ್ಚರಿಕೆಯ ನಡೆಯನ್ನು ಅನುಸರಿಸುತ್ತಿದ್ದು. ಸರ್ಕಾರ ವಿಶ್ವಾಸಮತವನ್ನು ಗೆಲ್ಲಲು ಸಾಧ್ಯವಿಲ್ಲದಂತಹ ವಾತಾವರಣವನ್ನು ನಿರ್ಮಿಸುತ್ತಿದೆ.

ಬಿಜೆಪಿಯ ಚಾಣಾಕ್ಷತಂತ್ರದ ಹೊರತಾಗಿಯೂ ದೋಸ್ತಿ ಪಕ್ಷಗಳು ರಾಜಕೀಯ ಗಂಡಾಗುಂಡಿ ಯೋಜನೆಯನ್ನು ರೂಪಿಸಿದ್ದು, ಶತಾಯಗತಾಯ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ನಡೆಸಿವೆ.

ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್ 101, ಬಿಜೆಪಿ 107 ಶಾಸಕರ ಸಂಖ್ಯಾಬಲ ಹೊಂದಿದೆ. ಹಾಗೂ ಹೀಗೂ ಪ್ರಯತ್ನ ಪಟ್ಟರೆ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ, ರೋಷನ್‍ಬೇಗ್ ಅವರ ಮನವೊಲಿಸುವ ಪ್ರಯತ್ನ ಮಾಡಬಹುದು. ಬಿಎಸ್‍ಪಿಯ ಎನ್.ಮಹೇಶ್ ಕೂಡ ಒಪ್ಪಿದರೆ ದೋಸ್ತಿ ಪಕ್ಷಗಳ ಸಂಖ್ಯಾ ಬಲ 104 ಆಗಲಿದೆ. ಇನ್ನು ನಾಲ್ಕು ಮಂದಿಯ ಶಾಸಕರ ಕೊರತೆ ಇದ್ದು, ರಾಮಲಿಂಗಾರೆಡ್ಡಿ ಒಪ್ಪಿದರೆ ಮುಂಬೈನಲ್ಲಿರುವ ಶಾಸಕರು ಮರಳಿ ಬರಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ, ಕೊನೆಕ್ಷಣದಲ್ಲಿ ಅದು ಕೈ ಕೊಟ್ಟರೂ ಕೊಡಬಹುದು ಎಂಬ ಆತಂಕವಿದೆ.

ಹೀಗಾಗಿ ವಿಶ್ವಾಸ ಮತಯಾಚನೆಗೂ ಮುನ್ನ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಎಂದು ಜೆಡಿಎಸ್-ಕಾಂಗ್ರೆಸ್ ನಾಯಕರು ಸ್ಪೀಕರ್‍ಗೆ ದೂರು ನೀಡಿದ್ದಾರೆ.

ಸ್ಪೀಕರ್ ಅವರು ದೂರು ಆಧರಿಸಿ ನಿರ್ಧಾರ ಕೈಗೊಂಡರೆ ದೋಸ್ತಿ ಸರ್ಕಾರದ ಸಂಖ್ಯಾಬಲ ಕುಸಿದಿರುವುದು ಮೇಲೆಳಲು ಸಾಧ್ಯವೇ ಇಲ್ಲ. ಹೀಗಾಗಿ ಪರ್ಯಾಯ ಮಾರ್ಗಗಳ ಬಗ್ಗೆ ದೋಸ್ತಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ.

ಬಿಜೆಪಿಯ ಬುಟ್ಟಿಗೆ ಕೈ ಹಾಕಿ ಒಂದಷ್ಟು ಶಾಸಕರನ್ನು ಗೈರು ಹಾಜರುಮಾಡುವುದು. ಅದು ಸಾಧ್ಯವಾಗದೇ ಹೋದರೆ ವಿಧಾನಸಭೆ ಕಲಾಪದಲ್ಲಿ ಗದ್ದಲದ ನೆಪವಿಟ್ಟುಕೊಂಡು ಒಂದಿಷ್ಟು ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರ ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರ ಮುಖಂಡರು ಸಮಾಲೋಚನೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ