ಬೆಂಗಳೂರು,ಜು.15- ಅಂತು ಇಂತೂ ಸಮ್ಮಿಶ್ರ ಶರ್ಕಾರ ವಿಶ್ವಾಸಮತಕ್ಕೆ ಮುಹೂರ್ತ ನಿಗಧಿಯಾಗಿದ್ದು ಗುರುವಾರ 11 ಗಂಟೆಗೆ ಎಚ್‍ಡಿಕೆ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ.
ಸ್ಪೀಕರ್ ರಮೇಶ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿಂದು ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆಯಾಗಿದ್ದು, ಬಿಜೆಪಿ ಇದೇ ದಿನ ವಿಶ್ವಾಸ ಮತಯಾಚನೆಗೆ ಪಟ್ಟು ಹಿಡಿದಿತ್ತು.
ಚರ್ಚೆಯ ನಂತರ ಸ್ಪೀಕರ್ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ಸಮಯ ನಿಗದಿ ಮಾಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಕೂಡ ಸಮ್ಮತಿಸಿದ್ದಾರೆ ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.
ನಿಯಮಾವಳಿ ಪ್ರಕಾರ ಸಂಸತ್‍ನಲ್ಲಿ 10 ದಿನಗಳ ಒಳಗೆ ಚರ್ಚೆಗೆ ಅವಕಾಶ ನೀಡಬೇಕು. ವಿಧಾನಸಭೆಯಲ್ಲಿ ಮೂರು ದಿನಗಳ ಕಾಲಾವಕಾಶವಿದೆ. ಹಾಗಾಗಿ ಸ್ಪೀಕರ್ ಅವರು ಗುರುವಾರಕ್ಕೆ ಸಮಯ ನಿಗದಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರಕ್ಕೆ ಸಮಯ ನಿಗದಿ ಮಾಡುವಂತೆ ಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಮನವಿ ಮಾಡಿದವು. ಆದರೆ ಇಂದು ಬಿಜೆಪಿ ಅವಿಶ್ವಾಸ ನಿರ್ಣಯದ ನಿಲುವಳಿ ಸೂಚನೆಯನ್ನು ಸ್ಪೀಕರ್ ಅವರಿಗೆ ಸಲ್ಲಿಸಿದೆ. ಹೀಗಾಗಿ ನಿಯಮಾವಳಿಯ ಪ್ರಕಾರ ಮೂರು ದಿನಗಳ ಒಳಗಾಗಿ ಕಾಲಾವಕಾಶ ನೀಡಬೇಕು. ಶುಕ್ರವಾರವೆಂದರೆ ವಿಳಂಬವಾಗುತ್ತದೆ. ಹಾಗಾಗಿ ಗುರುವಾರಕ್ಕೆ ಸಮಯ ನಿಗದಿ ಮಾಡಲಾಗಿದೆ ಎಂದರು.
ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳ 16 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಅಂಗೀಕರಿಸುವಂತೆ ಸಲಹೆ ನೀಡುವಂತೆ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದ್ದಾರೆ.
ಆ ಕುರಿತು ವಿಚಾರಣೆ ನಡೆದಿದ್ದು, ಸುಪ್ರೀಂಕೋರ್ಟ್ ನಾಳೆ ತನ್ನ ಅಭಿಪ್ರಾಯವನ್ನು ಪ್ರಕಟಿಸುವ ಸಾಧ್ಯತೆ ಇದೆ. ವಿಶ್ವಾಸ ಮತಯಾಚನೆ ಮೇಲೆ ನ್ಯಾಯಾಲಯದ ತೀರ್ಪು ಕೂಡ ಮಹತ್ವದ ಪರಿಣಾಮ ಬೀರಲಿದೆ.
ಈಗಾಗಲೇ ಮಧ್ಯಂತರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ವಿಷಯದಲ್ಲಿ ಮಂಗಳವಾರದವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದೆ.
ಒಂದು ವೇಳೆ ನಾಳೆ ಸುಪ್ರೀಂಕೋರ್ಟ್ ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಸ್ಪೀಕರ್‍ಗೆ ನಿರ್ಧಿಷ್ಟ ಸೂಚನೆ ನೀಡಿದರೆ, ಸ್ಪೀಕರ್ ಅವರ ತೀರ್ಮಾನವೇ ಅಂತಿಮ ಎಂದು ಪ್ರಕಟಿಸಿದರೆ ರಾಜ್ಯರಾಜಕಾರಣದ ಚಿತ್ರಣವೇ ಬದಲಾಗಲಿದೆ.
ಈಗಾಗಲೇ ಎಲ್ಲ ಪಕ್ಷಗಳ ಶಾಸಕರು ರೆಸಾರ್ಟ್ ಮತ್ತು ಹೋಟೆಲ್‍ಗಳಲ್ಲಿ ತಂಗಿದ್ದಾರೆ. ಗುರುವಾರದವರೆಗೂ ಅವರ ವಾಸ್ತವ್ಯ ರೆಸಾರ್ಟ್‍ನಲ್ಲೇ ಮುಂದುವರೆಯಲಿದೆ.
ರಾಜ್ಯರಾಜಕಾರಣದ ರೋಚಕ ಕ್ಲೈಮಾಕ್ಸ್‍ಗೆ ಗುರುವಾರ ಮುಹೂರ್ತ ನಿಗದಿಯಾಗಿದ್ದು, ವಿಶ್ವಾಸ ಮತದ ಚರ್ಚೆ ಆರಂಭಗೊಳ್ಳಲಿದೆ. ಬಹುತೇಕ ಅದೇ ದಿನ ಸಂಜೆಯೊಳಗೆ ವಿಶ್ವಾಸಮತಯಾಚನೆ ಪ್ರಕ್ರಿಯೆ ಅಂತಿಮಗೊಳ್ಳಬಹುದು ಅಥವಾ ಚರ್ಚೆ ಮುಂದುವರೆದರೆ ಶುಕ್ರವಾರದವರೆಗೂ ಸರ್ಕಾರದ ಅಸ್ತಿತ್ವ ಮುಂದುವರೆಯಬಹುದು.