ಬೆಂಗಳೂರು, ಜು.11-ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಉಂಟಾಗಿರುವ ಅಸ್ಥಿರತೆಯ ವಾತಾವರಣ ಕುರಿತಂತೆ ಕೇವಲ 15 ನಿಮಿಷ ನಡೆದ ಸಂಪುಟ ಸಭೆಯಲ್ಲಿಂದು ಗಂಭೀರ ಚರ್ಚೆ ನಡೆದಿದೆ.
ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವಾಗಿ ನಡೆಸಬೇಕಾದ ಕಾರ್ಯತಂತ್ರದ ಕುರಿತಂತೆ ಕೆಲ ಹಿರಿಯ ಸಚಿವರ ಅಭಿಪ್ರಾಯಗಳನ್ನು ಪಡೆಯಲಾಗಿದ್ದು, ಸುಪ್ರೀಂಕೋರ್ಟ್ನ ಆದೇಶದಿಂದ ಇಂದು ಸಂಜೆ ವೇಳೆಗೆ ನಡೆಯುವ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಮುಂದಿನ ನಡೆ ಬಗ್ಗೆ ಚಿಂತಿಸಲಾಗಿದೆ.
ರಾಜೀನಾಮೆ ನೀಡಿರುವ ಶಾಸಕರಲ್ಲಿ ರಮೇಶ್ ಜಾರಕಿ ಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರನ್ನು ಅನರ್ಹಗೊಳಿಸುವಂತೆ ಸ್ಪೀಕರ್ಗೆ ಮನವಿ ಮಾಡಿರುವ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ.
ಸರ್ಕಾರಕ್ಕೆ ಹಿನ್ನಡೆಯಾದರೆ ವಿಧಾನಮಂಡಲದಲ್ಲಿ ವಿಶ್ವಾಸ ಮತ ಯಾಚನೆಗೆ ಹೋಗಿ ಮತ್ತೊಂದು ಪ್ರಯತ್ನ ಮಾಡುವ ಆಲೋಚನೆಯೂ ಕೂಡ ಮಾಡಲಾಗಿದೆ.
ಕೊನೆ ಕ್ಷಣದವರೆಗೂ ಯಾವುದೇ ಕಾರಣಕ್ಕೂ ಬಿಜೆಪಿಗೆ ಸಲೀಸಾಗಿ ಸರ್ಕಾರ ರಚನೆ ನೀಡದಿರುವ ಕುರಿತಂತೆಯೂ ಗಂಭೀರವಾಗಿ ಚರ್ಚೆ ನಡೆಸಲಾಗಿದೆ.
ಇನ್ನೂ ಕೆಲವರು ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಅದನ್ನು ತಡೆಯುವುದು ಮತ್ತು ಮೈತ್ರಿಯಲ್ಲೇ ಹೊಸ ಸರ್ಕಾರ ರಚಿಸುವ ಕುರಿತು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಯಾವುದೇ ಕಾರಣಕ್ಕೂ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳದಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಕೇವಲ 15 ವಿಷಯಗಳು ಮಾತ್ರ ಸಂಪುಟದ ಮುಂದೆ ಬಂದಿದೆ.