ಮಧ್ಯಂತರ ಚುನಾವಣೆಗೆ ಮೈತ್ರಿ ಪಕ್ಷಗಳ ವಿರೋಧ

ಬೆಂಗಳೂರು, ಜು.11-ಜೆಡಿಎಸ್-ಕಾಂಗ್ರೆಸ್‍ನ ಸಮ್ಮಿಶ್ರ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಲೇಬೇಕು ಎಂಬ ಪ್ರಯತ್ನ ಪಡುತ್ತಿರುವ ದೋಸ್ತಿ ಪಕ್ಷಗಳ ನಾಯಕರು ಹಲವಾರು ಸಾಧ್ಯ-ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದ್ದು, ಅದರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಎಚ್.ಡಿ.ರೇವಣ್ಣ ಉಪಮುಖ್ಯಮಂತ್ರಿ ಎಂಬ ನಿಟ್ಟಿನಲ್ಲೂ ಚಿಂತನೆ ನಡೆಸಿದ್ದಾರೆ.

ಪ್ರಸ್ತುತ ಸಂದರ್ಭದಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡುವುದು ಅಥವಾ ಮಧ್ಯಂತರ ಚುನಾವಣೆಗೆ ಹೋಗುವುದು ಎರಡೂ ಅತ್ಯಂತ ಅಪಾಯಕಾರಿ ಸನ್ನಿವೇಶ. ಇತ್ತೀಚೆಗಷ್ಟೇ ಲೋಕಸಭೆ ಚುನಾವಣೆ ನಡೆದಿದ್ದು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ತಣ್ಣಗಾಗಿಲ್ಲ. ಈ ಸಂದರ್ಭದಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಿಸಿದರೆ, ಕಾಂಗ್ರೆಸ್ 30 ರಿಂದ 40 ಮತ್ತು ಜೆಡಿಎಸ್ 15 ರಿಂದ 20 ಸ್ಥಾನಗಳಿಗೆ ಕುಸಿಯಬಹುದು ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ.

ರಾಜಕೀಯ ಪಕ್ಷಗಳ ಅಂದಾಜು ಕೂಡ ಇದಕ್ಕಿಂತಲೂ ಹೆಚ್ಚಿಲ್ಲ. ಮಧ್ಯಂತರ ಚುನಾವಣೆಗೆ ಹೋಗಿದ್ದೇ ಆದರೆ ಮುಂದಿನ 5 ವರ್ಷಗಳ ಕಾಲ ಕೈಕಟ್ಟಿ ಕೂರಬೇಕಾಗುತ್ತದೆ ಎಂಬ ಆತಂಕ ಎರಡೂ ಪಕ್ಷಗಳ ನಾಯಕರಲ್ಲೂ ಇದೆ.
ಒಂದು ಹಂತದಲ್ಲಿ ವಿಧಾನಸಭೆಯನ್ನು ವಿಸರ್ಜಿಸಿ ಮಧ್ಯಂತರ ಚುನಾವಣೆಯನ್ನು ಎದುರಿಸುವುದು ಎಂಬ ಚರ್ಚೆಗಳು ನಡೆದಿದ್ದವು. ಆದರೆ ಅದಕ್ಕೆ ಎರಡೂ ಪಕ್ಷಗಳಲ್ಲೂ ಶಾಸಕರಾದಿಯಾಗಿ ಹಿರಿಯ ನಾಯಕರ ವಿರೋಧ ವ್ಯಕ್ತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ