ಶಾಸಕರ ಸಾಲು ಸಾಲು ರಾಜೀನಾಮೆ-ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಗಂಭೀರ ಚರ್ಚೆ

ಬೆಂಗಳೂರು, ಜು.11-ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡ ಆಡಳಿತ ಪಕ್ಷದ ಶಾಸಕರು ಸಾಲು ಸಾಲು ರಾಜೀನಾಮೆ ನೀಡುತ್ತಿರುವ ವಿಚಾರದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.
ಶಾಸಕರ ಮನವೊಲಿಸುವ ಪ್ರಯತ್ನ ನಡೆಸಿದರೂ ಫಲ ನೀಡದಿರುವುದು, ಕೊನೆ ಘಳಿಗೆಯವರೆಗೂ ಪ್ರಯತ್ನ ಬಿಡದೆ ಮುಂದುವರೆಸುವುದು ಸೇರಿದಂತೆ ಇನ್ನಿತರ ವಿಚಾರಗಳು ಮುನ್ನಲೆಗೆ ಬಂದವು.

ಸುಮಾರು 20ಕ್ಕೂ ಹೆಚ್ಚು ಶಾಸಕರು ಬಿಜೆಪಿ ಕಡೆ ವಾಲುವ ಸೂಚನೆಗಳಿದ್ದು, ಕಾಂಗ್ರೆಸ್‍ನಿಂದ ಈಗಾಗಲೇ 13 ಮಂದಿ, ಜೆಡಿಎಸ್‍ನ ಮೂವರು ರಾಜೀನಾಮೆ ನೀಡಿದ್ದಾರೆ. ಮತ್ತೆ ಉಭಯ ಪಕ್ಷಗಳವರು ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉಂಟಾಗಿರುವ ಸಂದರ್ಭವನ್ನು ಅವಲೋಕಿಸಿ ಸಂಪುಟ ಸಭೆಯಲ್ಲಿ ಚಿಂತನೆ ನಡೆಸಿ ಹೇಗೆ ಅವರನ್ನೆಲ್ಲ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ.

ಕಾಂಗ್ರೆಸ್‍ನ ಸಚಿವರೂ ಸಹ ಅತೃಪ್ತ ಶಾಸಕರ ಮನವೊಲಿಕೆಗೆ ನಡೆಸಿದ ಪ್ರಯತ್ನವನ್ನು ಸಹ ಸಭೆಯ ಗಮನಕ್ಕೆ ತರಲಾಯಿತು.ಇದ್ದಕ್ಕಿದ್ದ ಹಾಗೆ ಸಾಮೂಹಿಕವಾಗಿ ಇಷ್ಟೊಂದು ಮಂದಿ ಸಿಡಿದೆದ್ದು ರಾಜೀನಾಮೆ ನೀಡಿರುವುದಕ್ಕೆ ಕಳವಳ ವ್ಯಕ್ತವಾಯಿತು.

ನಿನ್ನೆ ಅತೃಪ್ತ ಶಾಸಕರ ಮನವೊಲಿಸಲು ಮುಂಬೈಗೆ ತೆರಳಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಂತಿಮ ಕ್ಷಣದವರೆಗೂ ಪ್ರಯತ್ನ ಮಾಡುವುದು, ಮುಂದಿನ ಪರಿಸ್ಥಿತಿ ಅನುಸರಿಸಿ ತೀರ್ಮಾನ ಕೈಗೊಳ್ಳುವ ಸಮಾಲೋಚನೆ ನಡೆಸಲಾಯಿತು.

ಉಭಯ ಪಕ್ಷಗಳ ಶಾಸಕರು ಹಾಗೂ ಸಚಿವರು ಆಯಾ ಪಕ್ಷದ ನಾಯಕರಿಗೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಅಂಗೀಕಾರವಾಗಿಲ್ಲ. ಇಂದು ನಡೆದ ಸಂಪುಟ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳು ಆಡಳಿತಾತ್ಮಕ ವಿಚಾರಗಳ ಅಜೆಂಡಾ ಬಗ್ಗೆ ಸಮಾಲೋಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಸಂಪುಟ ಪುನಾರಚನೆ, ಅಧಿವೇಶನ ಇಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಎಲ್ಲವೂ ಸಮಗ್ರ ಚರ್ಚೆಗೆ ಒಳಗಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ