ಬೆಂಗಳೂರು; ರಾಜ್ಯಪಾಲ ವಜುಭಾಯ್ ವಾಲಾ ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅತೃಪ್ತರ ರಾಜೀನಾಮೆಯನ್ನು ಅಂಗೀಕರಿಸುವಂತೆ ಸ್ಪೀಕರ್ ಮೇಲೆ ಅನಗತ್ಯ ಒತ್ತಡ ಹೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಕೆ ಕೆ ಗೆಸ್ಟ್ ಹೌಸ್ನಲ್ಲಿ ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, “ರಾಜ್ಯಪಾಲ ವಜುಭಾಯ್ ವಾಲಾ ಬಿಜೆಪಿ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ರಾಜಭವನ ದುರುಪಯೋಗವಾಗುತ್ತಿದೆ. ಅತೃಪ್ತ ಶಾಸಕರು ಸಲ್ಲಿಸಿರುವ ರಾಜೀನಾಮೆಗಳಲ್ಲಿ ಕೆಲವು ಕ್ರಮಬದ್ಧವಾಗಿವೆ, ಮತ್ತೂ ಕೆಲವು ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆದರೆ, ಅದನ್ನು ಅಂಗೀಕರಿಸುವಂತೆ ರಾಜ್ಯಪಾಲ ಅನಗತ್ಯ ಒತ್ತಡ ಹಾಕುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
“ಸ್ಪೀಕರ್ ರಮೇಶ್ ಕುಮಾರ್ ಕುರಿತು ಮಾತನಾಡುವ ಮುನ್ನ ಅವರ ಹಿನ್ನೆಲೆ ತಿಳಿಯುವುದು ಒಳ್ಳೆಯದು. ಅವರು ಪಕ್ಷಾತೀತ ವ್ಯಕ್ತಿ ಎಂಬುದು ಎಲ್ಲರಿಗೂ ಗೊತ್ತು. ಸ್ಪೀಕರ್ ಸ್ಥಾನದಲ್ಲಿ ಕುಳಿತು ಅವರು ಆಡಳಿತ ಪಕ್ಷಕ್ಕೂ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸ್ಪೀಕರ್ ನಿರ್ಧಾರದಲ್ಲಿ ಅಸಮ್ಮತಿ ಇದ್ದರೆ ಅತೃಪ್ತರು ನ್ಯಾಯಾಲಯದ ಮೊರೆಹೋಗಲಿ. ಆದರೆ ಅದನ್ನು ಬಿಟ್ಟು ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಾದ ಕ್ರಮವಲ್ಲ” ಎಂದು ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿರುವ ದಿನೇಶ್ ಗುಂಡೂರಾವ್, “ಡಿ.ಕೆ. ಶಿವಕುಮಾರ್ ಅವರನ್ನು ಮುಂಬೈನಲ್ಲಿ ಅತೃಪ್ತ ಶಾಸಕರು ಉಳಿದುಕೊಂಡಿರುವ ಹೋಟೆಲ್ ಎದುರು ತಡೆದು ನಿಲ್ಲಿಸಲಾಗಿದೆ. ಅದು ಸರ್ಕಾರಿ ಹೋಟೆಲ್ ಅಲ್ಲ, ಹೀಗಾಗಿ ಡಿಕೆಶಿಯನ್ನು ತಡೆದು ನಿಲ್ಲಿಸಿದ ಷಡ್ಯಂತ್ರದ ಹಿಂದೆ ಬಿಜೆಪಿ ಕೈವಾಡ ಇರುವುದು ಸ್ಪಷ್ಟವಾಗಿದೆ. ಹೀಗಾಗಿ ಆ ಪಕ್ಷ ಏನು ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಅಲ್ಲದೆ, “ಬಿಜೆಪಿಯವರಿಗೆ ಅಪರೇಷನ್ ಕಮಲ ಮಾಡಲು ಕೋಟಿ ಕೋಟಿ ಹಣ ಎಲ್ಲಿಂದ ಬರುತ್ತಿದೆ? ಅವರ ಜೊತೆಯಲ್ಲಿರುವ ಎಲ್ಲರೂ ಸಾಚಾಗಳೆ? ಎಲ್ಲರೂ ಬಿಜೆಪಿ ಜೊತೆ ಹೋದರೆ ಅವರು ಬಚಾವ್, ಇಲ್ಲದಿದ್ದರೆ ಅವರನ್ನು ಟಾರ್ಗೆಟ್ ಮಾಡುವ ಪರಿಪಾಠ ಆರಂಭವಾಗಿದೆ. ಬಿಜೆಪಿಯವರ ಕುತಂತ್ರಕ್ಕೆ ಬಲಿಯಾದರೆ ನಮ್ಮ ಶಾಸಕರು ಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತದೆ. ನಮ್ಮ ಶಾಸಕರು ಅನರ್ಹರಾದರೆ ಅಮಿತ್ ಷಾ ಅಲ್ಲ ಯಾರೂ ಮಾತನಾಡಿಸಲ್ಲ. ಈ ಬಗ್ಗೆ ಅತೃಪ್ತರು ಎಚ್ಚರಿಕೆಯಿಂದ ಇರಲಿ” ಎಂದು ಎಚ್ಚರಿಸಿದ್ದಾರೆ.