ಬಿಜೆಪಿಗೆ ನೈತಿಕತೆಯಿದ್ದರೆ ಅನರ್ಹರಿಗೆ ಟಿಕೆಟ್‌ ನೀಡಬಾರದು: ಕಾಂಗ್ರೆಸ್‌

ಬೆಂಗಳೂರು: ಅನರ್ಹತೆ ಎನ್ನುವುದೇ ಒಂದು ಕಳಂಕ. ಅಂದಿನ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ 17 ಮಂದಿ ತಪ್ಪಿತಸ್ಥರು ಎಂದು ಹೇಳಿ ಅನರ್ಹಗೊಳಿಸಿದ್ದರು. ಈಗ ಸುಪ್ರೀಂ ಕೋರ್ಟ್‌ ಕೂಡ ಅವರನ್ನು ತಪ್ಪಿತಸ್ಥರು ಎಂದು ಹೇಳಿ ಅನರ್ಹತೆಯನ್ನು ಎತ್ತಿ ಹಿಡಿದಿದೆ. ಹೀಗಾಗಿ ಬಿಜೆಪಿಗೆ ನೈತಿಕತೆ ಇದ್ದರೆ ಈ ಅನರ್ಹರಿಗೆ ಟಿಕೆಟ್‌ ನೀಡಬಾರದು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆ ಈ ಸರಕಾರಕ್ಕೆ ಅಧಿಕಾರದಲ್ಲಿ ಉಳಿಯುವ ನೈತಿಕತೆಯಿಲ್ಲ. ಸ್ಪೀಕರ್ ನಿರ್ಧಾರ ಸರಿ ಎಂಬುದನ್ನು ಸುಪ್ರೀಂ ತೀರ್ಪು ಬಯಲು ಗೊಳಿಸಿದೆ. ಕುದುರೆ ವ್ಯಾಪಾರ ನಡೆದಿರುವುದು ಸಾಬೀತಾಗಿದೆ. ಶೀಘ್ರದಲ್ಲೇ ರಾಷ್ಟ್ರಪತಿ ಭೇಟಿ ಮಾಡಿ ರಾಜ್ಯ ಸರಕಾರದ ವಿರುದ್ಧ ದೂರು ದಾಖಲಿಸಲಾಗುವುದು. ಬಿಜೆಪಿಯನ್ನು ಅಧಿಕಾರದಿಂದ ವಜಾ ಗೊಳಿಸಲು ಒತ್ತಾಯ ಮಾಡಲು ನಿರ್ಧಾರ ಮಾಡಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇನೆ. ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸಿದ್ದು ಸ್ಪಷ್ಟವಾಗಿದೆ. ಬಿಎಸ್‌ ಯಡಿಯೂರಪ್ಪ ಮತ್ತು ಅಮಿತ್‌ ಶಾ ಅವರು ನಮ್ಮ ಶಾಸಕರನ್ನು ರಾಜೀನಾಮೆ ಕೊಡಿಸುವ ಕೆಲಸದಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ತೀರ್ಪಿನಿಂದ ಸ್ಪಷ್ಟವಾಗಿದೆ. ಬಿಜೆಪಿ ನೈತಿಕತೆಯೆಂಬುದು ಉಳಿದಿದ್ದರೆ ಅನರ್ಹಗೊಂಡಿರುವ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಬಾರದು. ಸಿಎಂ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಗುಂಡೂರಾವ್‌ ಒತ್ತಾಯಿಸಿದರು.

ಪಕ್ಷಕ್ಕೆ ದ್ರೋಹ ಮಾಡಿರುವ ಅನರ್ಹ ಶಾಸಕರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ದಿನೇಶ್‌ ಗುಂಡೂರಾವ್‌, ಬಿಜೆಪಿ ಸರಕಾರ ಕಾನೂನು ಬಾಹಿರ ಸರಕಾರವಾಗಿದೆ. ಮೆಜಾರಿಟಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಅಸಂಸದೀಯವಾಗಿ ವರ್ತಿಸಿದೆ. ಈ ಸರಕಾರವನ್ನು ತಕ್ಷಣ ವಜಾ ಮಾಡಬೇಕು ಎಂದು ಟ್ವೀಟ್‌ ಮೂಲಕ ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ತೀರ್ಪಿನಿಂದ ಬಿಜೆಪಿ ನಡೆಸಿದ ಕುದುರೆ ವ್ಯಾಪಾರ ಬಯಲಾಗಿದೆ. ರಾಜ್ಯದ ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ರಾಯಚೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಿಎಂ ಯಡಿಯೂರಪ್ಪ ಅವರು ಸುಪ್ರೀಂ ತೀರ್ಪಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ. ಕೇಂದ್ರ ಸರಕಾರ ಪಕ್ಷಾಂತರ ನಿಷೇಧ ಕಾಯಿದೆ ಜಾರಿಗೆ ತರಲು ಈಗಲಾದರೂ ಮುಂದಾಗ ಬೇಕು. ಅನರ್ಹ ಶಾಸಕರಿಗೆ ಇದು ತಕ್ಕ ಪಾಠ. ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತದಾರರ ಬೆಂಬಲ ಖಚಿತ. ಮತದಾರ ರಿಂದ ಬಿಜೆಪಿ ಗೆ ಉಪ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.

ಶಿವಮೊಗ್ಗದಲ್ಲಿ ಸಿಎಂ ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಅವರು ಗಳಿಸಿದ ಅಕ್ರಮ ಆಸ್ತಿಯೇ ತುಂಬಿದೆ. ಆದರೆ ಅದರ ಬಗ್ಗೆ ಕೇಂದ್ರ ಸರಕಾರ ತನಿಖೆ ನಡೆಸಲ್ಲ. ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಕೋಟ್ಯಂತರ ರು. ಆಫರ್ ನೀಡಿದ ಬಗ್ಗೆ ಕೆಪಿಸಿಸಿ ವತಿಯಿಂದ ದಾಖಲಿಸಿದ ದೂರಿನ ಬಗ್ಗೆ ತನಿಖೆ ನಡೆಸಲು ಕೇಂದ್ರ ಆಸಕ್ತಿ ತೋರಲ್ಲ. ಆದರೆ ಕಾಂಗ್ರೆಸ್ ನಾಯಕರ ವಿರುದ್ಧ ಮಾತ್ರ ನಿರಂತರ ದಾಳಿ ಮಾಡುವುದು, ತನಿಖೆ ಚುರುಕುಗೊಳಿಸುವುದು ಬಿಜೆಪಿಯ ದ್ವೇಷದ ರಾಜಕಾರಣ ಬಯಲು ಗೊಳಿಸಿದೆ. ಬಿಜೆಪಿ ವಿರುದ್ಧ ಹೋರಾಡುವವರನ್ನು ಗುರಿಯಾಗಿ ಸಿಕೊಂಡು ತನಿಖಾ ಸಂಸ್ಥೆ ಬಳಕೆ ಮಾಡಿ ತನಿಖೆ ನಡೆಸಲಾಗುತ್ತಿದೆ. ಬಿಜೆಪಿ ಪರ ಮಾತಾಡಿದರೆ ದಾಳಿಯಾಗಲ್ಲ. ಇದು ಯಾವ ರೀತಿಯ ರಾಜಕೀಯ ಎಂಬುದನ್ನು ಜನತೆ ತಿಳಿಯಬೇಕಿದೆ ಎಂದು ಗುಂಡೂರಾವ್‌ ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ