ಪಕ್ಷದ ನಾಯಕರಲ್ಲಿ ಸಮನ್ವಯತೆ ಇರಬೇಕು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು, ಜು.21-ಪಕ್ಷದ ನಾಯಕರಲ್ಲಿ ಸಮನ್ವಯತೆ ಇರಬೇಕು. ನಮ್ಮಲ್ಲಿ ಸಮನ್ವಯತೆ ಇಲ್ಲದಿದ್ದರೆ ಯಾವ ಸಮನ್ವಯ ಸಮಿತಿ ಇದ್ದರೇನು ಪ್ರಯೋಜನ ಎಂದು ಇಂದಿಲ್ಲಿ ಹೇಳಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಲ್ಲ ನಾಯಕರು ಒಟ್ಟಾಗಿ ಹೋಗಬೇಕಾದ ಅಗತ್ಯತೆಯನ್ನು ಪ್ರತಿಪಾದಿಸಿದರು.
ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾದ ನಂತರ ನಗರದ ಗುರುನಾನಕ್ ಭವನದಲ್ಲಿ ಪ್ರಥಮ ಬಾರಿಗೆ ನಡೆದ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ನಮ್ಮಲ್ಲಿ ಸಮನ್ವಯತೆ ಇರಬೇಕು. ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಸಮನ್ವಯತೆ ನಮ್ಮಲ್ಲಿ ಇಲ್ಲದಿದ್ದರೆ ಯಾವ ಸಮಿತಿ ಇದ್ದರೆ ಏನು ಉಪಯೋಗ ಎಂದು ಅವರು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆ ನಮಗೆ ಒಂದು ದೊಡ್ಡ ಸವಾಲಾಗಿದೆ. ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಈ ವೇಳೆ ಚುನಾವಣೆ ಆದರೆ ಅಕ್ಟೋಬರ್‍ನಲ್ಲಿ ಅಧಿಸೂಚನೆ ಆಗಲಿದೆ. ಇದಕ್ಕೆ ನಾವೆಲ್ಲ ಸಮರೋಪಾದಿಯಲ್ಲಿ ಸಜ್ಜಾಗಬೇಕಾಗುತ್ತದೆ ಎಂದು ಅವರು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಲಿಲ್ಲ. ಐದು ವರ್ಷಗಳಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಉತ್ತಮ ಕೆಲಸ ಮಾಡಿದರೂ ಜನಮನ್ನಣೆ ದೊರೆಯಲಿಲ್ಲ. ಜಾತಿ, ಧರ್ಮ ಆಧಾರಿತ ವಿಷಯಗಳಿಂದ ಸೋಲಾಯಿತು. ಭಾವನಾತ್ಮಕ ವಿಷಯಗಳಿಗೆ ಜನ ಬೆಲೆ ನೀಡಿದರು. ಆದರೂ ಶೇಕಡಾವಾರು ಮತದಾನದಲ್ಲಿ ಕಾಂಗ್ರೆಸ್‍ಗೆ ಹೆಚ್ಚು ಮತಗಳು ಲಭಿಸಿವೆ. ಹೆಚ್ಚು ಸ್ಥಾನಗಳನ್ನು ಪಡೆಯಲಾಗದಿದ್ದರೂ ಹೆಚ್ಚು ಮತ ಪಡೆದು ಜನಮನ್ನಣೆ ಉಳಿಸಿಕೊಂಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಮುಖ್ಯವಾಗಿರುತ್ತದೆ ಎಂದರು.

ಅನಿವಾರ್ಯ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದೇವೆ. ನಮ್ಮಲ್ಲೇ ಸಮ್ಮಿಶ್ರ ಸರ್ಕಾರಕ್ಕೆ ಅಪಸ್ವರ ಕೇಳಿಬಂತು. ಮೈತ್ರಿ ಸರ್ಕಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆಯಾಗುತ್ತದೆ ಎಂದು ಹಲವರು ಹೇಳುತ್ತಿದ್ದಾರೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬ ಆಕ್ಷೇಪ ಮಾಡಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಸೊರಗದ ರೀತಿಯಲ್ಲಿ ನಾವು ನೋಡಿಕೊಳ್ಳಬೇಕಾಗಿದೆ. ಈ ಬಗ್ಗೆ ಹಿರಿಯರು ಚರ್ಚೆ ಮಾಡಬೇಕು ಎಂದು ದಿನೇಶ್ ತಿಳಿಸಿದರು.

ಬಿಜೆಪಿ ಪಕ್ಷವನ್ನು ದೂರವಿಡುವ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ. ಸಣ್ಣಪುಟ್ಟ ನೋವುಗಳಾದರೂ ನಾವು ಸಹಿಸಿಕೊಳ್ಳಬೇಕು. ಇದನ್ನು ನಮ್ಮ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ನಮ್ಮ ಕೆಲವು ನಾಯಕರೇ ಕಾಂಗ್ರೆಸ್ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಾಧ್ಯಮಗಳು ಕಾಂಗ್ರೆಸ್ ಮೇಲೆ ಕಣ್ಣಿಟ್ಟಿವೆ. ಬೇರೆ ಪಕ್ಷಗಳವರು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದರೂ ಮಾಧ್ಯಮಗಳವರು ಕ್ಷಮಿಸುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷದವರ ಸಣ್ಣ ತಪ್ಪುಗಳನ್ನು ವೈಭವೀಕರಿಸುತ್ತಾರೆ. ಹಾಗಾಗಿ ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ಶಿಸ್ತು ಪಾಲನೆ ಮಾಡುವಂತೆ ಈಗಾಗಲೇ ಮೌಖಿಕವಾಗಿ ಸೂಚನೆ ಕೊಟ್ಟಿದ್ದೇನೆ. ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ವೈಫಲ್ಯಗಳನ್ನು ನಾವು ಜನರ ಮುಂದೆ ಕೊಂಡೊಯ್ಯಬೇಕು. ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಿ ಹೆಚ್ಚಿನ ಸ್ಥಾನ ಗೆಲ್ಲಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವತ್ತ ಗಮನ ಹರಿಸಬೇಕು ಎಂದು ಗುಂಡೂರಾವ್ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ