ನವದೆಹಲಿ, ಜು.10– ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ(ಸಿಬಿಐ) ಉತ್ತರ ಪ್ರದೇಶದ ಮೂರು ಜಿಲ್ಲೆಗಳ ಹಲವೆಡೆ ದಾಳಿ ನಡೆಸಿ ಅವ್ಯವಹಾರಗಳನ್ನು ಪತ್ತೆ ಮಾಡಿ ಕೆಲವರನ್ನು ವಶಕ್ಕೆ ತೆಗೆದುಕೊಂಡಿದೆ.
ಉತ್ತರ ಪ್ರದೇಶದ ಹಮೀರ್ಪುರ್, ಫತೇಪುರ್ ಮತ್ತು ಬುಲಂದ್ಶಹರ್ ಜಿಲ್ಲೆಗಳ ಹಲವು ಸ್ಥಳಗಳ ಮೇಳೆ ಸಿಬಿಐ ಅಧಿಕಾರಿಗಳು ಇಂದು ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡರು.
ದಾಳಿ ವೇಳೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೆಲವು ಅವ್ಯವಹಾರಗಳು ಪತ್ತೆಯಾಗಿದ್ದು, ದಾಖಲೆಪತ್ರಗಳೊಂದಿಗೆ ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭ್ರಷ್ಟಾಚಾರ, ಕ್ರಿಮಿನಲ್ ದುರ್ನಡತೆ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಗಳ ವಿರುದ್ಧ ಸಿಬಿಐ ರಾಷ್ಟ್ರಾದ್ಯಂತ ಬಿರುಸಿನ ನಿನ್ನೆಯಷ್ಟೇ ಕಠಿಣ ಕ್ರಮ ಕೈಗೊಂಡಿತ್ತು.
ಹೊಸ ಪ್ರಕರಣಗಳ ಸಂಬಂಧ ಸಿಬಿಐ ಅಧಿಕಾರಿಗಳು 19 ರಾಜ್ಯಗಳ 110 ಸ್ಥಳಗಳ ಮೇಲೆ ನಿನ್ನೆ ತೀವ್ರ ಶೋಧ ನಡೆಸಿತ್ತು. ಈ ಸಂಬಂಧ ಕೆಲವರನ್ನು ಬಂಧಿಸಿ ಅಕ್ರಮ ಶಸ್ತಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಸಿಬಿಐ ಈ ಸಂಬಂಧ ಹೊಸ 30 ಪ್ರಕರಣಗಳನ್ನು ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಿದೆ