ಬೆಂಗಳೂರು, ಜು.9- ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ ಅವರನ್ನು ಹೊರತು ಪಡಿಸಿ ಉಳಿದ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್ ರಮೇಶ್ಕುಮಾರ್ ಅವರನ್ನು ಭೇಟಿ ಮಾಡಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ದೂರು ನೀಡಿದರು.
ಅವರೊಂದಿಗೆ ಸ್ಪೀಕರ್ ಅವರನ್ನು ಭೇಟಿ ಮಾಡಿದ ದಿನೇಶ್ಗುಂಡೂರಾವ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಶಾಸಕರ ನಡವಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ರಾಜೀನಾಮೆ ನೀಡಿ ರಾಜ್ಯಪಾಲರನ್ನು ಭೇಟಿ ಮಾಡಿ ಮುಂಬೈಗೆ ತೆರಳಿರುವ ಶಾಸಕರ ವಿರುದ್ಧ ದೂರು ನೀಡಲಾಗಿದೆ ಎಂದರು.
ರಾಮಲಿಂಗಾರೆಡ್ಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಾದರೂ ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ರಾಜ್ಯಪಾಲರನ್ನೂ ಭೇಟಿ ಮಾಡಿಲ್ಲ. ಮುಂಬೈಗೂ ತೆರಳಲಿಲ್ಲ. ಹಾಗಾಗಿ ಅವರ ವಿರುದ್ಧ ದೂರು ನೀಡಿಲ್ಲ ಎಂದು ಹೇಳಿದರು.
ರಾಮಲಿಂಗಾರೆಡ್ಡಿ ಅವರ ಜತೆ ನಾವು ಸಂಧಾನ ಮಾತುಕತೆ ನಡೆಸಿದ್ದೇವೆ. ಅವರ ಪುತ್ರಿಯೂ ಆಗಿರುವ ಶಾಸಕಿ ಸೌಮ್ಯಾರೆಡ್ಡಿ ಇಂದು ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದರು. ಇನ್ನು ರೋಷನ್ ಬೇಗ್ ಅವರು ಈಗಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರ ಹೆಸರನ್ನು ದೂರಿನಲ್ಲಿ ಸೇರಿಸಿಲ್ಲ ಎಂದರು.
ಮುಂಬೈನಲ್ಲಿರುವ ಶಾಸಕರು ಈಗಲಾದರೂ ತಮ್ಮ ತಪ್ಪನ್ನು ತಿದ್ದುಕೊಂಡು ವಾಪಸ್ ಬಂದರೆ ಒಳ್ಳೆಯದು. ಇಲ್ಲದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.