ಮೈತ್ರಿ ಪಕ್ಷಗಳ ಸಂಖ್ಯಾಬಲವನ್ನು 98ಕ್ಕೆ ಇಳಿಸಲು ಬಿಜೆಪಿಯಿಂದ ಮಾಸ್ಟರ್ ಪ್ಲಾನ್

ಬೆಂಗಳೂರು, ಜು.9- ದೋಸ್ತಿ ಪಕ್ಷಗಳ ಶಾಸಕರ ಸಂಖ್ಯಾಬಲವನ್ನು 98ಕ್ಕಿಳಿಸಲು ಮಾಸ್ಟರ್ ಪ್ಲಾನ್ ಮಾಡಿರುವ ಬಿಜೆಪಿ ಪಕ್ಷಾಂತರ ಮಾಡುವ ಶಾಸಕರಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಮಾಡುವ ಆತ್ಮವಿಶ್ವಾಸ ತುಂಬುತ್ತಿದೆ.

ಈಗಾಗಲೇ ಕಾಂಗ್ರೆಸ್‍ನ 11 ಮಂದಿ ಹಾಗೂ ಜೆಡಿಎಸ್ ಮೂವರು ಶಾಸಕರು ಸೇರಿ ಒಟ್ಟು 14 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದ ದೋಸ್ತಿ ಪಕ್ಷದ ಸಂಖ್ಯಾಬಲ 104ಕ್ಕೆ ಕುಸಿದಿದೆ.

ಈ 14 ಮಂದಿಯಲ್ಲಿ ಕೆಲವರು ಕೈ ಕೊಡುವ ಸಾಧ್ಯತೆ ಇರುವುದರಿಂದ ಇನ್ನೂ 6 ಮಂದಿಯನ್ನು ಆಪರೇಷನ್ ಕಮಲದ ಕೆಡ್ಡಾಗಿ ಬೀಳಿಸಲಾಗಿದೆ. ಬಿಜೆಪಿ ನಾಯಕರಿಂದ ಸೂಚನೆ ಸಿಕ್ಕ ತಕ್ಷಣವೇ ಈ ಆರು ಮಂದಿ ಶಾಸಕರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ಹೇಳಲಾಗಿದೆ.

ಒಟ್ಟಾರೆ ಜೆಡಿಎಸ್-ಕಾಂಗ್ರೆಸ್‍ನ ಸಂಖ್ಯಾಬಲವನ್ನು 98ಕ್ಕಿಳಿಸಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರ ಪೈಕಿ ಕೆಲವರನ್ನು ಬಿಜೆಪಿಗೆ ಸೇರಿಸಲು ಸ್ಥಳೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಕೆಲವರ ಮೇಲೆ ಬಿಜೆಪಿಗೆ ಅನುಮಾನ ಇದೆ. ಹೀಗಾಗಿ ಅಂತಹವರನ್ನು ಸರ್ಕಾರ ರಚನೆ ಪ್ರಕ್ರಿಯಿಂದ ದೂರವಿರಿಸಲು ಬಿಜೆಪಿ ಚಿಂತನೆ ನಡೆಸಿದೆ.

ಕಾಂಗ್ರೆಸ್ ಈ ಅತೃಪ್ತ ಶಾಸಕರ ವಿರುದ್ಧ ಪಕ್ಷಾಂತರ ಕಾಯ್ದೆಯಡಿ ದೂರು ಕೊಟ್ಟು ಕ್ರಮ ಕೈಗೊಳ್ಳುವ ಬೆದರಿಕೆ ಹಾಕುತ್ತಿದೆ. ಆದರೆ, ಅದಕ್ಕೆ ಹೆದರಂತೆ ಅತೃಪ್ತ ಶಾಸಕರಿಗೆ ಬಿಜೆಪಿಯವರು ಧೈರ್ಯ ತುಂಬುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ