ಡಾರ್ಜಿಲಿಂಗ್, ಜು.9-ಪಶ್ಚಿಮ ಬಂಗಾಳದ ವಿಶ್ವವಿಖ್ಯಾತ ಗಿರಿಧಾಮ ಡಾರ್ಜಿಲಿಂಗ್ನಲ್ಲಿ ಭಾರೀ ಮಳೆ ಮತ್ತು ಭೂಕುಸಿತಗಳಿಂದ ಮೂವರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಕೆಲವರು ಕಣ್ಮರೆಯಾಗಿದ್ದು, ಶೋಧ ಮುಂದುವರಿದಿದೆ.
ಡಾರ್ಜಿಲಿಂಗ್ ಜಿಲ್ಲೆಯ ಸುಖಿಯಾ ಪ್ರದೇಶದಲ್ಲಿ ಪುಬಂಗ್ ಫಟಕ್ ಎಂಬಲ್ಲಿ ಭಾರೀ ಭೂಕುಸಿತ ಸಂಭವಿಸಿ ಮನೆಯೊಂದು ಸಂಪೂರ್ಣ ಮಣ್ಣಿನ ರಾಶಿಗಳ ನಡುವೆ ಹುದುಗಿ ಹೋಯಿತು. ಈ ಘಟನೆಯಲ್ಲಿ ಮನೆಯಲ್ಲಿದ್ದ ದಂಪತಿ ಮೃತಪಟ್ಟರು.
ಘೂಮ್ ಕೇಂದ್ರದಲ್ಲಿ ಸಂಭವಿಸಿದ ಮತ್ತೊಂದು ಭೂಕುಸಿತದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟು ಕೆಲವರು ಗಾಯಗೊಂಡರು.
ಮಣ್ಣಿನ ರಾಶಿಯಲ್ಲಿ ಕೆಲವರು ಸಿಲುಕಿರುವ ಶಂಕೆ ಇದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಭಾರೀ ಮಳೆ ಮತ್ತು ಭೂಕುಸಿತದಿಂದ ಡಾರ್ಜಿಲಿಂಗ್ನ ಬಹುತೇಕ ಕಡೆ ಸಂಚಾರ ವ್ಯವಸ್ಥೆಗೆ ಅಡಚಣೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.