ವಿಶ್ವಕಪ್ ಕ್ರಿಕೆಟ್:ಎಲ್ಲರ ನೋಟ ಸೆಮೀಸ್‍ನತ್ತ

ಮ್ಯಾನ್‍ಚೆಸ್ಟರ್, ಜು.7- ವಿಶ್ವಕಪ್‍ನ ರೌಂಡ್ ರಾಬಿನ್ ಸುತ್ತು ಅಂತಿಮವಾಗಿದ್ದು ಈಗ ಎಲ್ಲರ ಚಿತ್ತ ಸೆಮೀಸ್‍ನತ್ತ ನೆಟ್ಟಿದೆ.

ರೌಂಡ್ ರಾಬಿನ್‍ನ ಅಂತಿಮ ದಿನದಲ್ಲಿ ಶ್ರೀಲಂಕಾ ತಂಡವನ್ನು ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡವು ಸೋಲಿಸುವ ಮೂಲಕ 15 ಅಂಕಗಳನ್ನು ಕಲೆ ಹಾಕಿ ಟಾಪ್ 1 ಸ್ಥಾನಕ್ಕೇರಿದರೆ, ದಕ್ಷಿಣ ಆಪ್ರಿಕಾ ವಿರುದ್ಧ ಸೋತು ಸೊರಗಿದ ಆರೋನ್ ಪಿಂಚ್ ಪಡೆಯು 14 ಅಂಕಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಇಂಗ್ಲೆಂಡ್ ( 12 ಅಂಕ) ಹಾಗೂ ನ್ಯೂಜಿಲೆಂಡ್ (11 ಅಂಕ) ಗಳಿಸಿ 3 ಹಾಗೂ 4ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ವಿಶ್ವಕಪ್‍ನ ಪೂರ್ಣ ನಿಯೋಜಿತದಂತೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾಯಿ ತಂಡವು ನಾಲ್ಕನೇ ಸ್ಥಾನ ಪಡೆಯುವ ತಂಡದ ವಿರುದ್ಧ ಸೆಣಸಿದರೆ, 2ನೆ ತಂಡವು 3ನೆ ತಂಡವನ್ನು ಎದುರಿಸಬೇಕಾಗಿತ್ತು.

ಈಗ ಅಗ್ರಸ್ಥಾಯಿ ಆಗಿರುವ ಭಾರತ ತಂಡವು ನ್ಯೂಜಿಲೆಂಡ್‍ನ ವಿರುದ್ಧ ಜುಲೈ 9 ರಂದು ಮ್ಯಾನ್‍ಚೆಸ್ಟರ್‍ನಲ್ಲಿ ಸೆಣಸಲಿದೆ. ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆಯ ವಿರುದ್ಧ ಅಭೂತಪೂರ್ವ ಗೆಲುವು ಗಳಿಸಿರುವ ಕೇನ್ ವಿಲಿಯಮ್ಸ್ ಪಡೆಯು 2015ರ ವಿಶ್ವಕಪ್‍ನ ಪೈನಲ್‍ನಲ್ಲಿ ಪ್ರಶಸ್ತಿ ಗೆಲ್ಲಲು ಎಡವಿತ್ತು.

1983, 2011ರ ವಿಶ್ವ ಚಾಂಪಿಯನ್ಸ್ ಆಗಿರುವ ಭಾರತ ತಂಡವು ಈ ಬಾರಿಯು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದು ಸೆಮೀಸ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದು ಪೈನಲ್‍ಗೇರುವ ತವಕದಲ್ಲಿದೆ. ರೌಂಡ್ ರಾಬಿನ್ ಸುತ್ತಿನಲ್ಲಿ ನಡೆಯಬೇಕಾಗಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯವು ಮಳೆಗೆ ಆಹುತಿಯಾಗಿದ್ದರಿಂದ ಸೆಮೀಸ್ ಪಂದ್ಯ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.

ರೋಹಿತ್‍ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿಯಂತಹ ದೈತ್ಯ ಬ್ಯಾಟ್ಸ್‍ಮನ್‍ಗಳು ಜಸ್‍ಪ್ರೀತ್ ಬೂಮ್ರಾ, ಭುವನೇಶ್ವರ್‍ಕುಮಾರ್, ಮೊಹಮ್ಮದ್ ಶಮಿಯಂತಹ ವೇಗದ ಬೌಲರ್‍ಗಳನ್ನೊಳಗೊಂಡಿರುವ ಟೀಂ ಇಂಡಿಯಾ, ಕೇನ್ ವಿಲಿಯಮ್ಸ್, ರಾಸ್ ಟೇಲರ್, ಗುಪ್ಟಿಲ್‍ರಂತಹ ಘಟಾನುಘಟಿ ಬ್ಯಾಟ್ಸ್‍ಮನ್‍ಗಳು, ಟ್ರೆಂಡ್ ಬೋಲ್ಟ್, ಹೆನ್ರಿಯಂತಹ ಕಲಾತ್ಮಕ ಬೌಲರ್‍ಗಳನ್ನು ಹೊಂದಿರುವ ನ್ಯೂಜಿಲೆಂಡ್ ತಂಡದ ವಿರುದ್ಧ ಗೆದ್ದು ಪೈನಲ್‍ಗೇರುವ ಹುಮ್ಮಸ್ಸಿನಲ್ಲಿದೆ.

ಮತ್ತೊಂದು ಸೆಮೀಸ್‍ನಲ್ಲಿ ಐದು ಬಾರಿ ವಿಶ್ವ ಚಾಂಪಿಯನ್ಸ್ ಆಗಿರುವ ಆಸ್ಟ್ರೇಲಿಯಾ ತಂಡವು ಅತಿಥೇಯ ಇಂಗ್ಲೆಂಡ್‍ನ ಸವಾಲನ್ನು ಎದುರಿಸಿ ಪೈನಲ್‍ಗೇರಿ ಆರನೇ ಬಾರಿಗೆ ವಿಶ್ವ ಚಾಂಪಿಯನ್ಸ್ ಆಗುವ ತವಕದಲ್ಲಿದ್ದು ಈ ಪಂದ್ಯವು ಜುಲೈ 11 ರಂದು ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎರಡು ತಂಡಗಳಲ್ಲೂ ಡೇವಿಡ್ ವಾರ್ನರ್, ಆರೋನ್‍ಪಿಂಚ್, ಸ್ಟೀವನ್ ಸ್ಮಿತ್, ಇಯಾನ್ ಮಾರ್ಗನ್, ಬ್ಯಾರಿಸ್ಟೋವ್, ಜಸನ್‍ರಾಯ್‍ರಂತಹ ಸ್ಪೋಟಕ ಬ್ಯಾಟ್ಸ್‍ಮನ್‍ಗಳು ಮಿಚಲ್ ಜಾನ್ಸನ್, ಬೆನ್‍ಡ್ರೋಪ್, ಪ್ಯಾಟ್ ಕುಮ್ಮಿನ್ಸ್, ವೋಕ್ಸ್, ಆರ್ಚರ್, ವುಡ್‍ರಂತಹ ಬೌಲರ್‍ಗಳನ್ನು ಹೊಂದಿದ್ದು ಪೈನಲ್‍ಗೇರುವ ತಂಡ ಯಾವುದು ಎಂಬ ಯಕ್ಷ ಪ್ರಶ್ನೆ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ