ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ-ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜು.8- ಬಿಜೆಪಿಯವರು ಏನು ಮಾಡುತ್ತಾರೆ, ಬೇರೆಯವರು ಏನು ಮಾಡುತ್ತಾರೆ ಎಂಬುವುದರ ಅವಶ್ಯಕತೆ ತಮಗಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ನುಡಿದರು.

ವಿಧಾನಸೌಧದಲ್ಲಿ ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಕುರಿತಂತೆ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಯಾರು ಏನು ಮಾಡುತ್ತಾರೆ ಎಂಬುವುದರ ಬಗ್ಗೆ ನನಗೆ ಸಂಬಂಧವಿಲ್ಲ. ರಾಜ್ಯದ ಜನರ ಕೆಲಸ ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ತಮ್ಮ ಮೇಲಿದ್ದು ಅದನ್ನು ನಿರ್ವಹಿಸುತ್ತಿರುವುದಾಗಿ ಹೇಳಿದ ಅವರು, ರಾಜಕೀಯ ಬೆಳವಣಿಗೆಗಳ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ ಎಂದರು.

ಮೈಶುಗರ್ ಕಾರ್ಖಾನೆಗೆ ಈಗಾಗಲೇ 428 ಕೋಟಿ ರೂ. ಹಣ ನೀಡಿದ್ದರು. ಹಲವು ಲೋಪಗಳಿಂದ ಕೂಡಿದೆ ಈ ಕಾರ್ಖಾನೆ ಪುನಃಶ್ಚೇತನಗೊಳಿಸುವ ಸಂಬಂಧ ಸುದೀರ್ಘ ಸಮಾಲೋಚನೆ ನಡೆಸಲಾಗಿದೆ. ಪುನಃಶ್ಚೇತನಕ್ಕೆ 69 ಕೋಟಿ ರೂ.ಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಷ್ಟು ಹಣ ಕೊಟ್ಟರೂ ಪುನಃಶ್ಚೇತನಗೊಳ್ಳುವ ಬಗ್ಗೆ ಸ್ಪಷ್ಟ ನಿರ್ಧಾರವಿಲ್ಲ ಎಂದು ಹೇಳಿದರು.

ಬೀದಿಯಲ್ಲಿ ನಿಂತು ಬೈಯ್ಯುವ ಒಂದು ವರ್ಗವಿದೆ. ಕೆಲ ರೈತ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ , ಸೂಚನೆ ನೀಡಿದ್ದಾರೆ. ಒಟ್ಟಾರೆ ರೈತರನ್ನು ಉಳಿಸಲು ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

ಹೊಸ ಸಕ್ಕರೆ ಕಾರ್ಖಾನೆ ವಿಚಾರವೇ ಬೇರೆ. ಈಗಿರುವ ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲೇ ಕಬ್ಬನ್ನು ಅರೆಯಬೇಕಿದೆ. ಪುನಃಶ್ಚೇತನಕ್ಕೆ ಹಣದ ಅವಶ್ಯಕತೆ ಇದ್ದು , ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಸಚಿವರಾದ ಪುಟ್ಟರಾಜು, ಆರ್.ಬಿ.ತಿಮ್ಮಾಪುರ, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಸರ್ಕಾರದ ಹಿರಿಯ ಅಧಿಕಾರಿಗಳು , ರೈತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ