ಅತೃಪ್ತ ಶಾಸಕರ ಬಗ್ಗೆ ಏನೂ ಹೇಳುವುದಿಲ್ಲ-ಸಚಿವ ಡಿ.ಸಿ.ತಮ್ಮಣ್ಣ

ಬೆಂಗಳೂರು, ಜು. 8- ಅತೃಪ್ತ ಶಾಸಕರ ರಾಜೀನಾಮೆ ನೀಡಿರುವ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ತಾವು ಬದ್ಧ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಪಕ್ಷದ ವರಿಷ್ಠರು ಯಾವುದೇ ಕ್ರಮ ಕೈಗೊಂಡರೂ ನಾವು ಬದ್ಧವಾಗಿರುತ್ತೇವೆ.

ಕಾಮರಾಜ ಸೂತ್ರದಂತೆ ಎಲ್ಲ ಸಚಿವರ ರಾಜೀನಾಮೆ ಪಡೆದು ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ಮಾಡಿದರೂ, ನಮ್ಮದೇನು ಅಭ್ಯಂತರವಿಲ್ಲ ಎಂದರು.

ಸ್ವಾಮಿ ನಿಷ್ಠೆ, ಪಕ್ಷ ನಿಷ್ಠೆಯಿದ್ದರೆ ಸಮಸ್ಯೆ ಬಗೆಹರಿಸಬೇಕು ಎಂದ ಅವರು, ತಾವು ಕೂಡ ಸ್ವಾಮಿ ನಿಷ್ಠೆ, ಪಕ್ಷ ನಿಷ್ಠೆಗೆ ಬದ್ಧರಾಗಿದ್ದೇವೆ. ಪಕ್ಷ ತಾಯಿ ಇದ್ದಂತೆ ಸರ್ಕಾರ ಉಳಿಸಿಕೊಳ್ಳಲು ವರಿಷ್ಠರು ಯಾವುದೇ ತಂತ್ರ ಅನುಸರಿಸಿದರೂ ಅದಕ್ಕೆ ನಮ್ಮ ಅನುಮತಿ ಇದೆ ಎಂದು ಹೇಳಿದರು.

ಜೆಡಿಎಸ್‍ನ ಮೂವರು ಅತೃಪ್ತರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಅತೃಪ್ತ ಶಾಸಕರ ಸಂಸ್ಕøತಿ ತೋರುತ್ತದೆ. ಅತೃಪ್ತ ಶಾಸಕರ ಬಗ್ಗೆ ಏನು ಹೇಳುವುದಿಲ್ಲ. ಆಯಾಯ ಕ್ಷೇತ್ರದ ಮತದಾರರು ತೀರ್ಮಾನ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ