ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಮುಖಂಡರು ಅದಕ್ಕಾಗಿ ಎಲ್ಲ ಹಾಲಿ ಸಚಿವರ ರಾಜೀನಾಮೆಯನ್ನು ಪಡೆದು, ಅತೃಪ್ತರಿಗೆ ಸ್ಥಾನ ನೀಡಲು ನಿರ್ಧರಿಸಿದೆ.
ಈ ಸಂಬಂಧ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಮತ್ತು ಕೆ.ಸಿ.ವೇಣುಗೋಪಾಲ್ ಪಕ್ಷದ ತೀರ್ಮಾನವನ್ನು ಪ್ರಕಟಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಪ್ರಜಾಪ್ರಭತ್ವ ವಿರೋಧಿ ಕೆಲಸಗಳನ್ನು ನಾವು ನೋಡಿಕೊಂಡು ಬಂದಿದ್ದೇವೆ. ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆರೋಪ ಮಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲ ಮೂಲಕ ಬಿಜೆಪಿ, ಮೈತ್ರಿ ಸರ್ಕಾರ ಬೀಳಿಸಲು ಪ್ರಯತ್ನಿಸುತ್ತಿದೆ. ನಮಗೆ ಈಗಲೂ ನಂಬಿಕೆ ಇದೆ. ಈ ಸರ್ಕಾರ ಮುಂದುವರೆಯುತ್ತದೆ. ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ಒಂದು ವರ್ಷದಲ್ಲಿ ಆರು ಬಾರಿ ವಿಫಲ ಯತ್ನ ನಡೆಸಿದೆ ಎಂದು ಹೇಳಿದರು.
ಸರ್ಕಾರ ನಡೆಸಲು ಬಿಜೆಪಿಗೆ ಬೇಕಾದ ಬಹುಮತವನ್ನು ಜನರು ನೀಡಿಲ್ಲ. ಶೇಕಡಾವಾರು ಮತ ಗಳಿಕೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಮುಂದಿದೆ. ನಮಗಿಂತ ಸ್ವಲ್ಪ ಹೆಚ್ಚಿಗೆ ಶಾಸಕರು ಗೆದ್ದಿರಬಹುದು. ಆದರೆ, ಅವರು ಸರ್ಕಾರ ನಡೆಸುವಂತೆ ಜನರು ಆದೇಶ ನೀಡಿಲ್ಲ. ಆದರೆ, ಕೇಂದ್ರ ಸರ್ಕಾರವನ್ನು ಬಳಸಿಕೊಂಡು ಬಿಜೆಪಿ ಒಂದು ವರ್ಷದಿಂದ ಸರ್ಕಾರ ಬೀಳಿಸಲು ಯತ್ನಿಸುತ್ತಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ. ಎಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದೆಯೋ ಅಲ್ಲಿ ಕುತಂತ್ರದ ಮೂಲಕ ಸರ್ಕಾರ ಬೀಳುವ ಯತ್ನ ಮಾಡುತ್ತಿದೆ.
ಈಗಾಗಲೇ ಸರ್ಕಾರ ಕೆಡವಲು ಬಿಜೆಪಿ ಐದು ಬಾರಿ ವಿಫಲ ಯತ್ನ ನಡೆಸಿ, ಇದೀಗ ಆರನೇ ಬಾರಿ ಆಪರೇಷನ್ ಕಮಲ ಮಾಡಲು ಮುಂದಾಗಿದೆ. ಆದರೆ, ಇದು ವಿಫಲವಾಗಲಿದೆ ಎಂದು ಭವಿಷ್ಯ ನುಡಿದರು.
ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ನಮ್ಮ ಸಚಿವರು ಸ್ವಯಂಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಪಕ್ಷ ಸಂಪೂರ್ಣ ಸ್ವತಂತ್ರವಾಗಿ ಯಾರ್ಯಾರು ಮಂತ್ರಿಗಳಾಗಬೇಕು ಎಂಬ ಉದ್ದೇಶದಿಂದ ರಾಜೀನಾಮೆ ನೀಡಿದ್ದಾರೋ ಅವರೆಲ್ಲರಿಗೂ ಮಂತ್ರಿ ಪದವಿ ನೀಡುತ್ತೇವೆ. ಅವರೆಲ್ಲ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಬೇಕು. ಯಾರೂ ಆತುರದ ನಿರ್ಧಾರ ಕೈಗೊಂಡು ಬಿಜೆಪಿ ಸೇರುವುದು ಬೇಡ ಎಂದು ಮನವಿ ಮಾಡಿದರು.
ಒಂದು ಪಕ್ಷದ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿ ಬಚ್ಚಿಟ್ಟಿರುವುದು ಬಿಜೆಪಿಗೆ ಆದ ಡ್ಯಾಮೇಜ್. ಇದರಿಂದ ನಮ್ಮ ಪಕ್ಷಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.