ವಿಧಾನಸಭೆಯ ಒಟ್ಟು ಸಂಖ್ಯೆ 224

ಬಿಜೆಪಿ -105+2= 107
ಕಾಂಗ್ರೆಸ್ -78
ಜೆಡಿಎಸ್- 38
ಬಿಎಸ್‍ಪಿ -01
ಪಕ್ಷೇತರ -01
ರಾಜೀನಾಮೆ ನೀಡಿರುವವರು -13
ಬಹುಮತಕ್ಕೆ ಬೇಕಾದ ಸಂಖ್ಯೆ-106

ಬಿಜೆಪಿಗೆ ಪಕ್ಷೇತರ ಶಾಸಕರ ಬೆಂಬಲ
ಬೆಂಬಲ ಬೆಂಗಳೂರು, ಜು.8-ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್ ಶಂಕರ್ ಅವರು ಬಿಜೆಪಿಗೆ ಬೆಂಬಲ ನೀಡಿರುವುದರ ಜೊತೆಗೆ ಈಗಾಗಲೇ 13 ಮಂದಿ ಶಾಸಕರು ರಾಜೀನಾಮೆ ಕೊಟ್ಟಿರುವ ಕಾರಣ ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿದ್ದು ಯಾವುದೇ ಕ್ಷಣದಲ್ಲೂ ಪತನವಾಗುವ ಸಾಧ್ಯತೆ ಇದೆ.

ಈಗಾಗಲೇ 13 ಶಾಸಕರು ರಾಜೀನಾಮೆ ನೀಡಿರುವುದರಿಂದ ಕಾಂಗ್ರೆಸ್-ಜೆಡಿಎಸ್ ಬೆಂಬಲ 104ಕ್ಕೆ ಇಳಿದಿದೆ. ಹೆಚ್.ನಾಗೇಶ್ ರಾಜ್ಯಪಾಲರಿಗೆ ನೀಡಿರುವ ಪತ್ರದಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿರುವುದರಿಂದ ಅವರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.

ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಕಂಡುಬರುತ್ತಿರುವುದರಿಂದ ಮೈತ್ರಿ ಬಲ 100ಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆಯೇ ಹೆಚ್ಚಾಗಿದೆ.

ವಿಧಾನಸಭೆಯ ಒಟ್ಟು 224 ಸದಸ್ಯರಲ್ಲಿ ಕಳೆದ ಶನಿವಾರದವರೆಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 118, ಬಿಜೆಪಿ 105 ಹಾಗೂ ಬಿಎಸ್‍ಪಿಯ ಓರ್ವ ಶಾಸಕ ಇದ್ದಾರೆ.

ಎನ್.ಮಹೇಶ್ ಈ ಹಿಂದೆ ಸಿಎಂ ಕುಮಾರಸ್ವಾಮಿ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಶನಿವಾರ ನಡೆದ ಕ್ಷಿಪ್ರ ಬೆಳವಣಿಗೆಗಳಲ್ಲಿ 12 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಕಳೆದ ಸೋಮವಾರ ವಿಜಯನಗರ ಶಾಸಕ ಆನಂದ್ ಸಿಂಗ್ ರಾಜೀನಾಮೆಯನ್ನು ನೀಡಿದ್ದಾರೆ. ಮೈತ್ರಿ ಪಕ್ಷದಿಂದ ಈಗಾಗಲೇ 13 ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ.

ಬಲಾಬಲಕ್ಕೆ ವೇದಿಕೆ:
ಇನ್ನು ವಿಧಾನಸಭೆ ಬಲಾಬಲ ಪರೀಕ್ಷೆಗೆ ವೇದಿಕೆಯಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿವೆ. ನಾಳೆ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ರಾಜೀನಾಮೆ ನೀಡಿರುವ ಶಾಸಕರ ಪತ್ರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಒಂದು ವೇಳೆ ತಾಂತ್ರಿಕ ಕಾರಣ ಇಲ್ಲವೇ ಪ್ರತಿಯೊಬ್ಬ ಶಾಸಕರನ್ನು ಮುಖಾಮುಖಿ ಭೇಟಿಯಾಗುವುದರ ಜೊತೆಗೆ ಈ ಹಿಂದೆ ಡಾ.ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸಲು ಅನುಸರಿಸಿದ ಕ್ರಮವನ್ನೇ ಮುಂದುವರೆಸಿದರೆ ಬಿಜೆಪಿ ಇದಕ್ಕೂ ತಂತ್ರವನ್ನು ಹೆಣೆದಿದೆ.

ರಾಜೀನಾಮೆ ನೀಡಿರುವ ಎಲ್ಲ ಶಾಸಕರು ಈಗಾಗಲೇ ರಾಜ್ಯಪಾಲರಿಗೆ ತಾವು ರಾಜೀನಾಮೆ ನೀಡಿರುವುದನ್ನು ದೃಢೀಕರಿಸುವ ಸ್ವೀಕೃತಿ ಪತ್ರವನ್ನು ನೀಡಿದ್ದಾರೆ.

ಇದನ್ನೇ ಮುಂದಿಟ್ಟುಕೊಂಡು ಸ್ಪೀಕರ್ ವಿರುದ್ದ ಅವಿಶ್ವಾಸ ನಿರ್ಣಯ ಇಲ್ಲವೇ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಜ್ಜಾಗಿದ್ದಾರೆ.

ಸ್ಪೀಕರ್ ಅವರ ನಡೆಯ ಮೇಲೆ ಎಲ್ಲವೂ ತೀರ್ಮಾನವಾಗಲಿದೆ.ತೀರಾ ವಿಳಂಬ ನೀತಿ ಅನುಸರಿಸಿದರೆ ರಾಜ್ಯಪಾಲರ ಮೂಲಕವೂ ಆಟವಾಡಲು ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸಿದೆ.

ಈಗಾಗಲೇ ದೋಸ್ತಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂಬುದು ರಾಜ್ಯಪಾಲರಿಗೆ ಮನವರಿಕೆಯಾಗಿದೆ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅವರು ಯಾವುದೇ ಸಂದರ್ಭದಲ್ಲೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜಭವನಕ್ಕೆ ಕರೆದು ಸರ್ಕಾರಕ್ಕೆ ಇರುವ ಬಹುಮತ ಸಾಬೀತುಪಡಿಸುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಬಹುಮತದಲ್ಲಿ ಸೋಲುಂಟಾದರೆ ಮುಖಭಂಗ ಅನುಭವಿಸುವ ಬದಲು ಒಂದೆರಡು ದಿನ ಕಾದು ನೋಡಿ ನೇರವಾಗಿ ರಾಜಭವನಕ್ಕೆ ತೆರಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆಯೂ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ.

ಅಂತಿಮವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಸೂಚನೆಯನ್ನೇ ಕಾಯುತ್ತಿದ್ದಾರೆ. ಪದ್ಮನಾಭನಗರದಿಂದ ನಿರ್ದೇಶನ ಬರುತ್ತಿದ್ದಂತೆ ಕುಮಾರಸ್ವಾಮಿ ರಾಜೀನಾಮೆ ನೀಡುವ ಆಲೋಚನೆಯಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ