ತೀವ್ರ ಅಸಮಾಧಾನಗೊಂಡಿರುವ ಸಿಎಂ ಕುಮಾರಸ್ವಾಮಿ-ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ?

ಬೆಂಗಳೂರು, ಜು.7-ಮೈತ್ರಿ ಸರ್ಕಾರ ರಚನೆಯಾದಾಗ ಷರತ್ತು ರಹಿತ ಬೆಂಬಲ ನೀಡಿದ ಕಾಂಗ್ರೆಸ್, ಈಗ ಷರತ್ತಿನ ಮೇಲೆ ಷರತ್ತುಗಳನ್ನು ಮುಂದೊಡ್ಡುತ್ತಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಾಧಾನಗೊಂಡಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಲಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಅತೃಪ್ತರನ್ನು ಮನವೊಲಿಸಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕಿಂತ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಸಾಧ್ಯತೆಗಳೇ ಹೆಚ್ಚಾಗಿವೆ ಎನ್ನಲಾಗಿದೆ.

ಅತೃಪ್ತ ಕಾಂಗ್ರೆಸ್ ಶಾಸಕರಲ್ಲಿ ಬಹುತೇಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರಾಗಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಬದಲಾವಣೆಯ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸಿ ಸರ್ಕಾರವನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಒಬ್ಬರನ್ನು ಸಮಾಧಾನಪಡಿಸಿದರೆ ಮತ್ತೊಬ್ಬರು ಅಸಮಾಧಾನಗೊಳ್ಳುತ್ತಾರೆ. ಈ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತಂದಿದ್ದರೂ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗಿಲ್ಲ.

ಅಲ್ಲದೆ, ರಾಜೀನಾಮೆ ನೀಡಿರುವ ಶಾಸಕರು ಮೈತ್ರಿ ಸರ್ಕಾರ ಹಾಗೂ ಮುಖ್ಯಮಂತ್ರಿ ವಿರುದ್ಧ ಆರೋಪವನ್ನು ಹೊರಿಸುತ್ತಿರುವುದು ಕೂಡ ಕುಮಾರಸ್ವಾಮಿಯವರ ಅಸಮಾಧಾನ ಹೆಚ್ಚಳಕ್ಕೆ ಕಾರಣವಾಗಿದೆ.

ಶಾಸಕರ ರಾಜೀನಾಮೆಯ ಬಿಕ್ಕಟ್ಟು ದೊಡ್ಡ ತಲೆನೋವಾಗಿ ಮಿತ್ರ ಪಕ್ಷಗಳಿಗೆ ಪರಿಣಮಿಸಿರುವ ಬೆನ್ನಲ್ಲೇ ಕಾಂಗ್ರೆಸ್‍ನಿಂದ ಅಧಿಕಾರ ಹಂಚಿಕೆ ಸೂಕ್ತ ಮರುಪರಿಶೀಲನೆ ಪ್ರಸ್ತಾಪ ವ್ಯಕ್ತವಾಗುತ್ತಿರುವುದು ಜೆಡಿಎಸ್ ಪಾಳಯದಲ್ಲಿ ಭಾರೀ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟುಕೊಡುವುದಾಗಿ ಹೇಳಲಾಗಿತ್ತು.ಈಗ ನಿಲುವನ್ನು ಬದಲಿಸಿರುವುದರಿಂದ ಸರ್ಕಾರ ಮುಂದುವರೆಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಹೊಸದಾಗಿ ಕಾಂಗ್ರೆಸ್ ಷರತ್ತು ವಿಧಿಸಿದ್ದೇ ಆದರೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಮುಖ್ಯಮಂತ್ರಿ ಬರಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಮೆರಿಕ ಪ್ರವಾಸ ಮುಗಿಸಿ ಇಂದು ಸಂಜೆ ವಾಪಸ್ಸಾಗುತ್ತಿರುವ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮುಂದೆ ಕೈಗೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚಿಸಲಿದ್ದಾರೆ. ಆ ನಂತರ ಸರ್ಕಾರ ಉಳಿಸಿಕೊಳ್ಳುವುದೋ ಅಥವಾ ರಾಜೀನಾಮೆ ನೀಡುವುದೋ ಎಂಬ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ