ಬೆಂಗಳೂರಿನ ಮೂವರು ಶಾಸಕರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ

ಬೆಂಗಳೂರು, ಜು.7-ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ಕೊಟ್ಟು ಅತೃಪ್ತರ ಬಣ ಸೇರಿಕೊಂಡಿರುವ ಬೆಂಗಳೂರಿನ ಮೂವರು ಶಾಸಕರ ಮೇಲೆ ಬಿಜೆಪಿ ಅನುಮಾನ ವ್ಯಕ್ತಪಡಿಸಿದ್ದು, ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ.

ಎಂಟು ಮಂದಿ ಶಾಸಕರು ಪೂರ್ವನಿಯೋಜಿತ ಯೋಜನೆಯಂತೆ ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ತಂಗಿದ್ದು, ನಂತರ ಸ್ಪೀಕರ್ ಕಚೇರಿಗೆ ರಾಜೀನಾಮೆ ಸಲ್ಲಿಸಿದ್ದರು. ಅವರ ಹಿಂದೆಯೇ ಬಂದಂತಹ ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಭೆರತಿಬಸವರಾಜ ಅವರು ನಾವು ಪಕ್ಷದ ಪರವಾಗಿ ಬಂದಿದ್ದೇವೆ.

ಅತೃಪ್ತರನ್ನು ವಾಪಸ್ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೇವೆ ಎಂದು ಹೇಳಿ ಸ್ಪೀಕರ್ ಕಚೇರಿಯೊಳಗೆ ಹೋದವರು ತಾವೂ ಕೂಡ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಬಿಜೆಪಿ ಪಾಳಯವನ್ನೇ ಚಕಿತಗೊಳಿಸಿದೆ.

ಬೆಂಗಳೂರಿನ ಮೂವರು ಶಾಸಕರ ನೇತೃತ್ವವನ್ನು ರಾಮಲಿಂಗಾರೆಡ್ಡಿ ಅವರು ವಹಿಸಿದ್ದು, ಬಿಜೆಪಿಯ ಕೆಲವು ನಾಯಕರ ಜೊತೆ ಮಾತುಕತೆ ನಡೆಸಿದ ನಂತರವೇ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಮೂವರೂ ಶಾಸಕರು ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದು, ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿಯವರ ಜೊತೆ ಸೇರಿರುವುದು ಆಶ್ಚರ್ಯ ಮೂಡಿಸಿದೆ.

ನಿನ್ನೆ ಮಧ್ಯಾಹ್ನ ಸಂಧಾನಕ್ಕಾಗಿ ಬಂದ ಡಿ.ಕೆ.ಶಿವಕುಮಾರ್ ಮುನಿರತ್ನ ಅವರ ರಾಜೀನಾಮೆ ಸ್ವೀಕೃತಿ ಪತ್ರ ಪಡೆದು ಹರಿದು ಹಾಕಿದ್ದರು.ಸ್ಪೀಕರ್ ಕಚೇರಿಯಲ್ಲಿ ನಡೆದ ಈ ಗಲಾಟೆ ವಿರುದ್ಧ ದೂರು ನೀಡುವಂತೆ ಬಿಜೆಪಿ ಮುನಿರತ್ನ ಅವರ ಮೇಲೆ ಒತ್ತಡ ಹೇರಿತ್ತು. ಆದರೆ ಅದಕ್ಕೆ ಮುನಿರತ್ನ ನಿರಾಕರಿಸಿದ್ದಾರೆ. ನಾವು ಪಕ್ಷ ಬಿಟ್ಟು ಹೊರಬರುತ್ತಿದ್ದು, ಯಾವುದೇ ನಾಯಕರ ವಿರುದ್ಧ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದು ಬಿಜೆಪಿಯ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ.

ಮೂವರು ಶಾಸಕರ ಪೈಕಿ ಇಬ್ಬರು 8 ಮಂದಿ ಅತೃಪ್ತ ಶಾಸಕರ ಜೊತೆ ಮುಂಬೈಗೆ ತೆರಳಿದ್ದಾರೆ. ಮುನಿರತ್ನ ಬೆಂಗಳೂರಿನಲ್ಲೇ ಉಳಿದುಕೊಂಡು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದು, ತಾವು ಪ್ರಾಮಾಣಿಕವಾಗಿ ಬಿಜೆಪಿಗೆ ಬೆಂಬಲ ನೀಡುವ ನಿರ್ಧಾರ ಕೈಗೊಂಡಿರುವುದಾಗಿ ನಂಬಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಆದರೆ ಈಗಾಗಲೇ ನಾಲ್ಕೈದು ಬಾರಿ ಆಪರೇಷನ್ ಕಮಲಕ್ಕೆ ಕೈ ಹಾಕಿ ಸಣ್ಣಪುಟ್ಟ ತಪ್ಪುಗಳಿಂದ ವೈಫಲ್ಯ ಅನುಭವಿಸಿರುವ ಬಿಜೆಪಿ ಈ ಬಾರಿ ಈ ಮೂವರು ಶಾಸಕರಿಂದಾಗಿ ಮತ್ತೆ ತೊಂದರೆಯಾಗಬಹುದೇ ಎಂಬ ಗೊಂದಲದಲ್ಲಿದೆ. ಹಾಗಾಗಿ ಈ ಮೂವರು ಶಾಸಕರಿಂದ ಅಂತರ ಕಾಯ್ದುಕೊಂಡೇ ಬಹಳಷ್ಟು ಮಾತುಕತೆ ನಡೆಯುತ್ತಿವೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ