ಈಗಿನ ಪರಿಸ್ಥಿತಿಯಲ್ಲಿ ಸರ್ಕಾರ ಉಳಿಸಿಕೊಳ್ಳುವುದು ಕಷ್ಟದ ವಿಷಯ-ಕಾಂಗ್ರೇಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಜು.7-ಜೆಡಿಎಸ್‍ಯೊಂದಿಗಿನ ಮೈತ್ರಿ ಮುಂದುವರೆಸಬೇಕೇ, ಬೇಡವೇ ಎಂಬ ನಿರ್ಧಾರವನ್ನು ಮೊದಲು ಹೈಕಮಾಂಡ್ ತೆಗೆದುಕೊಳ್ಳಲಿ. ನಂತರ ಮೈತ್ರಿ ಸರ್ಕಾರವನ್ನು ಮುಂದುವರೆಸಬೇಕೇ ಬೇಡವೆ ಎಂಬುದನ್ನು ನಾನು ಹೇಳುತ್ತೇನೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಜ್ಯ ರಾಜಕೀಯ ಬೆಳವಣಿಗೆಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿದ್ದು, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಪರವಾಗಿ ಅಹಮ್ಮದ್ ಪಟೇಲ್, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ ಚರ್ಚೆ ಮಾಡಿದ್ದಾರೆ. ಪರಿಸ್ಥಿತಿ ಇಷ್ಟು ಹದಗೆಟ್ಟ ಮೇಲೆ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವೇ ಎಂದು ಅಹಮ್ಮದ್ ಪಟೇಲ್ ಪ್ರಶ್ನಿಸಿದಾಗ, ಮೊದಲು ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರೆಸಬೇಕೇ ಬೇಡವೆ ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿ.ಈ ಮೊದಲು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಯಿತು. ಆದರೆ ಆ ಮೈತ್ರಿ ಸಫಲವಾಗಲಿಲ್ಲ. ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಮೈತ್ರಿಯಿಂದ ಲಾಭ ಇಲ್ಲ ಎಂಬುದು ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ.ಅದರ ಹೊರತಾಗಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರೆದಿದೆ. ಕಾಂಗ್ರೆಸ್‍ನ ಬಹಳಷ್ಟು ಶಾಸಕರಿಗೆ ಮೈತ್ರಿ ಬಗ್ಗೆ ಅಸಮಾಧಾನ ಇದೆ. ಹೀಗಾಗಿ ಕೆಲವರು ರಾಜೀನಾಮೆ ಕೊಟ್ಟಿದ್ದಾರೆ. ಹೈಕಮಾಂಡ್ ಸ್ಪಷ್ಟ ನಿರ್ಧಾರ ತೆಗೆದುಕೊಂಡು ತನ್ನ ನಿಲುವು ಸ್ಪಷ್ಟಪಡಿಸಿದರೆ, ನಾವಿಲ್ಲಿ ಮುಂದಿನ ಕಾರ್ಯಾಚರಣೆ ನಡೆಸಬಹುದು ಎಂದು ಖರ್ಗೆ ಸಲಹೆ ನೀಡಿದ್ದಾರೆ.

ಸರ್ಕಾರವನ್ನು ಈಗಿನ ಪರಿಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಕಷ್ಟದ ವಿಷಯ.11 ಮಂದಿ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ.ಇನ್ನಷ್ಟು ಮಂದಿ ರಾಜೀನಾಮೆ ಕೊಡುವ ತಯಾರಿಯಲ್ಲಿದ್ದಾರೆ.ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಒಂದು ವೇಳೆ ರಾಜೀನಾಮೆ ಕೊಟ್ಟವರ ಮನವೊಲಿಸಿ ಕರೆತಂದು ಸರ್ಕಾರ ಉಳಿಸಿಕೊಂಡರೂ ಮುಂದಿನ ದಿನಗಳಲ್ಲಿ ಸುಸೂತ್ರ ಆಡಳಿತ ನಡೆಸುವುದು ಸುಲಭದ ಮಾತಲ್ಲ. ಪದೇ ಪದೇ ಈ ರೀತಿಯ ಘಟನೆಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ. ಹೈಕಮಾಂಡ್ ನಿರ್ಧಾರಕ್ಕೆ ಕಟ್ಟುಬಿದ್ದು ಈವರೆಗೂ ರಾಜ್ಯ ನಾಯಕರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.

ರಾಜಕೀಯ ಏರುಪೇರಿನಿಂದ ಕೆಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹೈಕಮಾಂಡ್ ಸ್ಪಷ್ಟ ನಿರ್ಧಾರಕ್ಕೆ ಬಂದಿದ್ದೇ ಆದರೆ, ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಖರ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಮೈತ್ರಿ ಬಗ್ಗೆ ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳಿದರೆ ಆನಂತರ ನಾನು ನನ್ನ ಅಭಿಪ್ರಾಯ ತಿಳಿಸುತ್ತೇನೆ. ಸರ್ಕಾರ ಉಳಿಸಿಕೊಳ್ಳಬೇಕಾದರೆ ಏನು ಮಾಡಬೇಕು, ಒಂದು ವೇಳೆ ಸರ್ಕಾರ ಬೇಡ ಎಂದಾದರೆ ಯಾವೆಲ್ಲ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ