ಮುಖ್ಯಮಂತ್ರಿಯವರಿಗೆ ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡುವುದಿಲ್ಲ-ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಜು.7-ಆಡಳಿತ ಪಕ್ಷದ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ದೊರೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಐದು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಎಂದು ಹೇಳಿದ್ದು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದಲೂ ನಾವು ಸಭೆ ನಡೆಸುತ್ತಲೇ ಇದ್ದೇವೆ. ಮೈತ್ರಿ ಸರ್ಕಾರದ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರ ಹುಡುಕುತ್ತೇವೆ ಎಂದುಹೇಳಲಾಗುವುದಿಲ್ಲ. ಆದರೆ ಸಮಸ್ಯೆಗೆ ಔಷಧಿ, ಪರಿಹಾರ ಎಲ್ಲವನ್ನೂ ಕಂಡು ಹಿಡಿಯುತ್ತೇವೆ ಎಂದರು.

ಪಕ್ಷಕ್ಕಾಗಿ, ಸರ್ಕಾರಕ್ಕಾಗಿ ತಮ್ಮ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಿಂದಿನಿಂದ ಚೂರಿ ಹಾಕುವ ಕೆಲಸ ಮಾಡುವುದಿಲ್ಲ. ಬಿಜೆಪಿಯವರು ಕಣ್ಣು ಮುಚ್ಚಿ ಹಾಲು ಕುಡಿಯುತ್ತೇವೆ ಎನ್ನುತ್ತಿದ್ದಾರೆ. ಈ ಹಿಂದೆ ಸರ್ಕಾರ ರಚನೆ ಮಾಡಲಿಕ್ಕೆ ಆಗದೆ ಇದ್ದವರು ಈಗ ಮಾಡುತ್ತಾರಾ ಎಂದು ವ್ಯಂಗ್ಯವಾಡಿದರು.

ನಾವಂತೂ ಮಧ್ಯಂತರ ಚುನಾವಣೆಗೆ ಸಿದ್ಧವಿದ್ದು ಹೆದರುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ಎಲ್ಲರಿಗೂ ಸಚಿವ ಸ್ಥಾನದ ಆಫರ್ ಮಾಡಿದ್ದಾರೆ. ಬಿಜೆಪಿಯ ಕೆಲವು ಶಾಸಕರು ತಮ್ಮ ಜತೆ ಮಾತನಾಡಿದ್ದು, ಚುನಾವಣೆಗೆ ಹೋಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ನಾಯಕರಿಗೂ ಮಧ್ಯಂತರ ಚುನಾವಣೆಗೆ ಹೋಗಬೇಕು ಎಂಬುದೇ ಆಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ