ಸರ್ಕಾರ ಪತನವಾಗುವುದು 100ಕ್ಕೆ 100ರಷ್ಟು ಖಚಿತ-ಶಾಸಕ ಪ್ರತಾಪ್ ಗೌಡ ಪಾಟೀಲ್

ಬೆಂಗಳೂರು,ಜು.7- ನಾಳೆಯೊಳಗೆ ಮತ್ತೆ ದೋಸ್ತಿ ಪಕ್ಷಗಳಿಂದ 8ರಿಂದ 10 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಈಗಾಗಲೇ ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತ ಶಾಸಕರು ತಿಳಿಸಿದ್ದಾರೆ.

ಈಗಾಗಲೇ 12 ಮಂದಿ ಶಾಸಕರು ರಾಜೀನಾಮೆ ನೀಡಿ ಸರ್ಕಾರಕ್ಕೆ ಕಂಟಕ ತಂದಿರುವ ಬೆನ್ನಲ್ಲೆ ಅತೃಪ್ತ ಶಾಸಕರು ಸಿಡಿಸಿರುವ ಬಾಂಬ್ ಸಮ್ಮಿಶ್ರ ಸರ್ಕಾರದ ಜಂಘಾಬಲವನ್ನು ಉಡುಗುವಂತೆ ಮಾಡಿದೆ.

ಮುಂಬೈನಲ್ಲಿರುವ ಶಾಸಕರಾದ ಬಿ.ಸಿ.ಪಾಟೀಲ್ ಮತ್ತು ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ, ನಾಳೆ ಸಂಜೆಯೊಳಗೆ 8ರಿಂದ 10 ಮಂದಿ ಶಾಸಕರು ರಾಜೀನಾಮೆ ಕೊಡುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಶಾಸಕರು ರಾಜೀನಾಮೆ ಕೊಟ್ಟರೆ ಆಶ್ಚರ್ಯ ಪಡಬೇಕಿಲ್ಲ ಎಂದು ಹೇಳಿದ್ದಾರೆ.

ಬಿ.ಸಿ.ಪಾಟೀಲ್ ಮಾತನಾಡಿ, ನನಗಿರುವ ಮಾಹಿತಿಯಂತೆ 10 ಮಂದಿ ಶಾಸಕರು ರಾಜೀನಾಮೆಯನ್ನು ನಾಳೆ ಅಥವಾ ಮಂಗಳವಾರದೊಳಗೆ ಕೊಟ್ಟೆ ಕೊಡುತ್ತಾರೆ.

ಅಸಮಾಧಾನಗೊಂಡಿರುವ ಯಾವುದೇ ಶಾಸಕರು ಸರ್ಕಾರದಲ್ಲಿ ಮುಂದುವರೆಯಲು ಇಷ್ಟಪಡುತ್ತಿಲ್ಲ. ಕನಿಷ್ಟ ಪಕ್ಷ ನಮ್ಮ ಕ್ಷೇತ್ರದ ಕೆಲಸಗಳು ನಡೆಯುತ್ತಿಲ್ಲ ಎಂದಾದರೆ ನಾವು ಯಾವ ಪುರುಷಾರ್ಥಕ್ಕೆ ಇರಬೇಕೆಂದು ಪ್ರಶ್ನಿಸಿದರು.

ಸುಮಾರು 25ರಿಂದ 30 ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ನಾವು ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗಿಲ್ಲ. ಕಳೆದ ಒಂದು ವರ್ಷದಿಂದ ನಮ್ಮ ಕ್ಷೇತ್ರದಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅನುದಾನ ಹಂಚಿಕೆಯಲ್ಲೂ ತಾರತಮ್ಯಮಾಡಲಾಗಿದೆ. ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ವಿಷಯಗಳಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ. ಸಾಕಷ್ಟು ಬಾರಿ ಯೋಚಿಸಿಯೇ ಅಚಲವಾದ ನಿರ್ಧಾರಕ್ಕೆ ಬಂದಿದ್ದೇನೆ. ನನ್ನನ್ನು ಯಾರೇ ಓಲೈಕೆ ಮಾಡಿದರೂ ಇಟ್ಟಿರುವ ಹೆಜ್ಜೆಯಿಂದ ಹಿಂದೆ ಸರಿಯುವುದಿಲ್ಲ. ಶೀಘ್ರದಲ್ಲೇ ಬಿಜೆಪಿ ಸೇರುವುದಾಗಿ ಪ್ರಕಟಿಸಿದರು.

ಆಪರೇಷನ್ ಕಮಲಕ್ಕೆ ನಾವು ಬಲಿಯಾಗಿಲ್ಲ. ಹಣಕ್ಕೂ ಕೂಡ ನಮ್ಮನ್ನು ನಾವು ಮಾರಾಟ ಮಾಡಿಕೊಂಡಿಲ್ಲ. ಕ್ಷೇತ್ರದ ಜನತೆಯ ಅಭಿಪ್ರಾಯವನ್ನು ಪಡೆದೇ ರಾಜೀನಾಮೆ ನೀಡಿದ್ದೇನೆ. ನನ್ನ ನಿರ್ಧಾರ ಅಚಲ ಎಂದು ಪುನರುಚ್ಚರಿಸಿದರು.

ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ, ಯಾವುದೇ ಸಂದರ್ಭದಲ್ಲಿ ಇನ್ನು ಎಂಟರಿಂದ ಹತ್ತು ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ. ನನ್ನ ಕ್ಷೇತ್ರದಲ್ಲಿ ನಯಾಪೈಸೆಯ ಕೆಲಸವೂ ನಡೆದಿಲ್ಲ.ಹೀಗಿದ್ದ ಮೇಲೆ ನಾನು ಯಾವ ಕಾರಣಕ್ಕಾಗಿ ಸರ್ಕಾರದಲ್ಲಿ ಮುಂದುವರೆಯಲಿ ಎಂದು ಪ್ರಶ್ನಿಸಿದರು.

ನಾವೆಲ್ಲರೂ ದೃಢವಾದ ನಿರ್ಧಾರ ನೀಡಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಆಪರೇಷನ್‍ಕಮಲ, ಹಣ ಕೊಟ್ಟು ಖರೀದಿ ಮಾಡಿದ್ದಾರೆ ಎಂಬ ಆರೋಪಗಳು ಸುಳ್ಳು.ನಾವ್ಯಾರು ಸಣ್ಣ ಮಕ್ಕಳಲ್ಲ ಎಂದು ಹೇಳಿದರು.

22-25 ಶಾಸಕರು ರಾಜೀನಾಮೆ ಕೊಡಲಿದ್ದಾರೆ.ಮಂಗಳವಾರದೊಳಗೆ ಸಾಕಷ್ಟು ಬೆಳವಣಿಗೆಯಾಗಲಿದೆ. ಸಮ್ಮಿಶ್ರ ಸರ್ಕಾರ ಪತನವಾಗುವುದು 100ಕ್ಕೆ 100ರಷ್ಟು ಖಚಿತ. ಯಾರು ಎಷ್ಟೇ ಕಸರತ್ತು ನಡೆಸಿದರೂ ಸಾಧ್ಯವಿಲ್ಲ. ಅಸಮಾಧಾನಗೊಂಡಿರುವ ಶಾಸಕರನ್ನು ಎಷ್ಟು ದಿನ ಹಿಡಿದಿಟ್ಟುಕೊಳ್ಳಲು ಸಾಧ್ಯ. ಕೆಲವರ ಸ್ವಾರ್ಥಕ್ಕಾಗಿ ಸರ್ಕಾರವನ್ನು ಬಲಿ ಕೊಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಯಾರೊಬ್ಬರನ್ನು ದೂಷಣೆ ಮಾಡುವುದಿಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಸೂಚ್ಯವಾಗಿ ಹೇಳಿದರು.

ವಿಶ್ವನಾಥ್ ವಾಗ್ದಾಳಿ:

ನನಗೆ ರಾಜಕೀಯ ಪುರ್ನಜನ್ಮ ನೀಡಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಲ್ಲ. ತಮ್ಮ ಕ್ಷೇತ್ರದ ಜನರು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ನಾನು ಹೆಸರಿಗೆ ಮಾತ್ರ ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದೆ. ಮೈತ್ರಿ ಸರ್ಕಾರದಲ್ಲಿ ನನ್ನ ಅಳಿಯನ ವರ್ಗಾವಣೆ ಮಾಡಿಸಲೂ ನನ್ನಿಂದ ಸಾಧ್ಯವಾಗಿಲ್ಲ. ಆದರೆ ನನ್ನ ಅಳಿಯನಿಗೆ ಸಚಿವ ಸಾ.ರಾ.ಮಹೇಶ್ ಇಲ್ಲಸಲ್ಲದ ಎಂದು ಆರೋಪ ಮಾಡಿದರು.

ರಾಜ್ಯದಲ್ಲಿ ಜೆಡಿಎಸ್ ಈಗ ವಾಶೌಟ್ ಆಗಿದೆ ಎಂದು ಟೀಕಾ ಪ್ರಹಾರ ನಡೆಸಿದ ಅವರು, ಜೆಡಿಎಸ್ ನಾಯಕರ ನಡವಳಿಕೆ ಬಹುತೇಕ ಶಾಸಕರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ಸಚಿವ ಜಿ.ಟಿ.ದೇವೇಗೌಡ ಅವರು ಕೂಡ ರಾಜೀನಾಮೆ ಕೊಡುತ್ತಾರೆ ಕಾದು ನೋಡಿ ಎಂದು ಬಾಂಬ್ ಸಿಡಿಸಿದರು.

ಸಾ.ರಾ.ಮಹೇಶ್ ಅವರ ನಡವಳಿಕೆಯಿಂದ ಜಿ.ಟಿ.ದೇವೇಗೌಡರು ಬೇಸತ್ತುಹೋಗಿದ್ದಾರೆ. ಅವರು ಈಗಾಗಲೇ ಎಲ್ಲ ಪಕ್ಷದಲ್ಲಿದ್ದು ಬಂದಿರುವುದರಿಂದ ಹೆಚ್ಚಿನ ಅನುಭವವಿದೆ. ಶಾಸಕ ಸ್ಥಾನಕ್ಕೆ ಅವರು ಕೂಡ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ