ರಿವರ್ಸ್ ಆಪರೇಷನ್ ಹಿನ್ನಲೆ-ಸಂದೇಹಾಸ್ಪದ ಶಾಸಕರ ಮೇಲೆ ಹದ್ದಿನ ಕಣ್ಣಿಟ್ಟಿರುವ ಬಿಜೆಪಿ

ಬೆಂಗಳೂರು,ಜು.7-ಆಪರೇಷನ್ ಕಮಲಕ್ಕೆ ಪ್ರತಿಯಾಗಿ ರಿವರ್ಸ್ ಆಪರೇಷನ್ ನಡೆಸಬಹುದೆಂಬ ಟೀಕೆಗೆ ಒಳಗಾಗಿರುವ ಬಿಜೆಪಿ ಕೆಲವು ಸಂದೇಹಾಸ್ಪದ ಶಾಸಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಶಾಸಕರಾದ ಗೂಳಿಹಟ್ಟಿ ಶೇಖರ್(ಹೊಸದುರ್ಗ), ಪೂರ್ಣಿಮಾ ಶ್ರೀನಿವಾಸ(ಹಿರಿಯೂರು), ಶಿವರಾಜ್ ಪಾಟೀಲ್(ರಾಯಚೂರು ನಗರ), ಬಸವರಾಜ್ ದದ್ದೂರು( ಕನಕಗಿರಿ), ರಾಜುಗೌಡ ನಾಯಕ್(ಸುರಪುರ), ನಿರಂಜನ್(ಗುಂಡ್ಲುಪೇಟೆ) ಹಾಗೂ ನಾಗೇಂದ್ರ (ಚಾಮರಾಜ ಕ್ಷೇತ್ರ) ಇವರ ನಡೆಯ ಬಗ್ಗೆ ಅನುಮಾನ ಕಂಡುಬಂದಿರುವ ಕಾರಣ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಲಾಗಿದೆ.

ಬಿಜೆಪಿಯಲ್ಲಿರುವ ಕೆಲವು ಅತೃಪ್ತ ಶಾಸಕರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೆಳೆಯಬಹುದೆಂಬ ಕಾರಣಕ್ಕಾಗಿ ಈ ಎಲ್ಲ ಶಾಸಕರ ಮೇಲೆ ಸೂಕ್ಷ್ಮ ನಿಗಾ ವಹಿಸಲಾಗಿದೆ. ಈಗಾಗಲೇ ಕಳೆದ ರಾತ್ರಿ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ಕನಕಗಿರಿ ಶಾಸಕ ಬಸವರಾಜ್ ದದ್ದೂರ್ ಅವರನ್ನು ಡಾಲರ್ಸ್ ಕಾಲೋನಿಯ ತಮ್ಮ ನಿವಾಸಕ್ಕೆ ಕರೆಸಿಕೊಂಡು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗಬಾರದು, ಕನಕಗಿರಿಯಲ್ಲಿ ನಿಮಗೆ ಟಿಕೆಟ್ ನೀಡುವುದಕ್ಕೆ ಅಸಮಾಧಾನವಿದ್ದರೂ ನಾನು ಮುತರ್ವಜಿ ವಹಿಸಿ ಟಿಕೆಟ್ ಕೊಟ್ಟಿದ್ದೇನೆ. ನನ್ನ ವಿಶ್ವಾಸಕ್ಕೆ ದ್ರೋಹ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ನೇರವಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.

ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ. ನನ್ನ ರಾಜಕೀಯ ಎದುರಾಳಿಗಳು ಅದರಲ್ಲೂ ಮಾಜಿ ಸಚಿವರೊಬ್ಬರು ಈ ರೀತಿ ವ್ಯವಸ್ಥಿತವಾಗಿ ಮಾಧ್ಯಮಗಳಲ್ಲಿ ಷಡ್ಯಂತರ ರೂಪಿಸುತ್ತಿದ್ದಾರೆ. ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಪದೇ ಪದೇ ಹೇಳಿದರೂ ನನ್ನ ಹೆಸರು ಮುಂಚೂಣಿಗೆ ಬರುತ್ತದೆ. ನಾನು ಎಂಥದೇ ಸಂದರ್ಭದಲ್ಲೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ನನ್ನ ಬಗ್ಗೆ ಎಳ್ಳಷ್ಟು ಸಂಶಯ ಬೇಡ ಎಂದು ಆಶ್ವಾಸನೆ ಕೊಟ್ಟಿದ್ದಾರೆ.

ಇದೇ ರೀತಿ ಬಿಎಸ್‍ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ರಾಜು ಗೌಡ ನಾಯಕ್, ನಿರಂಜನ್, ಪೂರ್ಣಿಮಾ ಶ್ರೀನಿವಾಸ್ ಅವರುಗಳನ್ನು ಸಹ ಖುದ್ದು ಯಡಿಯೂರಪ್ಪನವರೇ ಮನವೊಲಿಸಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ನೀವು ಯಾರೊಬ್ಬರು ಪಕ್ಷ ಬಿಟ್ಟು ಹೋಗಬಾರದು. ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ನೀವು ನಮ್ಮ ಜೊತೆ ಕೈ ಜೋಡಿಸಬೇಕು. ಆಸೆ ಆಮೀಷಗಳಿಗೆ ಬಲಿಯಾಗಬೇಡಿ. ಅಧಿಕಾರಕ್ಕೆ ಬಂದ ನಂತರ ನಿಮ್ಮ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದಾರೆ.

ನಿಮ್ಮ ತಂದೆ ಕೃಷ್ಣಪ್ಪ ನಿಧನರಾದ ವೇಳೆ ನೀವು ಸಂಕಷ್ಟ ಸ್ಥಿತಿಯಲ್ಲಿದ್ದೀರಿ ಅಂಥ ಸಂದರ್ಭದಲ್ಲೂ ನಾನು ಪಕ್ಷ ವಿರೋಧ ಕಟ್ಟಿಕೊಂಡು ಹಿರಿಯೂರಿನಿಂದ ನಿಮಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್‍ಗೆ ಒತ್ತಡ ಹಾಕಿದ್ದೆ. ಸರ್ಕಾರ ಬಂದರೆ ಮಹಿಳಾ ಕೋಟಾದಲ್ಲಿ ನಿಮಗೆ ಮಂತ್ರಿ ಸ್ಥಾನ ನೀಡುತ್ತೇನೆ ಎಂದು ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಬಿಎಸ್‍ವೈ ತಿಳಿಸಿದ್ದಾರೆ.

ಇನ್ನು ಗುಂಡ್ಲುಪೇಟೆ ನಿರಂಜನ್ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಎಸ್‍ವೈ ನಿರಂಜನ್ ಜೊತೆಯೂ ಮಾತುಕತೆ ನಡೆಸಿದ್ದಾರೆ. ಅಲ್ಲದೆ ಮೈಸೂರು ಭಾಗದ ಪ್ರಭಾವಿ ಧಾರ್ಮಿಕ ಮುಖಂಡರೊಬ್ಬರ ಮೂಲಕವೂ ಯಡಿಯೂರಪ್ಪ ನಿರಂಜನ್ ಕುಮಾರ್ ಪಕ್ಷ ಬಿಟ್ಟು ಹೋಗದಂತೆ ಒತ್ತಡ ತಂತ್ರ ಅನುಸರಿಸಿದ್ದಾರೆ.

ಇದೀಗ ಶ್ರೀಗಳ ಮಧ್ಯಪ್ರವೇಶದಿಂದಾಗಿ ಅಡಕತ್ತರಿಗೆ ಸಿಲುಕಿರುವ ನಿರಂಜನ್‍ಕುಮಾರ್ ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ಆಶ್ವಾಸನೆಯನ್ನೂ ನೀಡಿದ್ದಾರೆ.

ಹೊಸದುರ್ಗದ ಗೂಳಿಹಟ್ಟಿ ಶೇಖರ್‍ಗೂ ಕೂಡ, ರಾಯಚೂರಿನ ಶಿವರಾಜ್ ಪಾಟೀಲ್‍ಗೂ ಕೂಡ ನಿರಂತರವಾಗಿ ಬೇರೆ ಬೇರೆ ಮುಖಂಡರಿಂದಲೂ ಪಕ್ಷ ಬಿಡದಂತೆ ಮನವೊಲಿಸಲಾಗಿದೆ.

ಸೆಳೆಯಲು ಪ್ರಯತ್ನ:

ಇನ್ನು ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಹೇಗಾದರೂ ಮಾಡಿ ಬಿಜೆಪಿಯ ಐದಾರು ಮಂದಿ ಶಾಸಕರ ರಾಜೀನಾಮೆ ಕೊಡಿಸಲಬೇಕೆಂದು ಪಟ್ಟು ಹಿಡಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಲು ಭಾರೀ ಕಸರತ್ತು ನಡೆಸಿದ್ದಾರೆ.

ಬಿಜೆಪಿಯಲ್ಲಿರುವ ಒಂದಿಷ್ಟು ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ಉಳಿಸಿಕೊಳ್ಳಲು ಉಭಯ ನಾಯಕರು ಮುಂದಾಗಿದ್ದಾರೆ. ಆದರೆ ಕಮಲ ಪಡೆಯ ಬಹುತೇಕ ಶಾಸಕರಿಗೆ ಭವಿಷ್ಯದ ಚಿಂತೆ ಇರುವುದರಿಂದ ಹೋಗಬೇಕೆ ಇಲ್ಲವೇ ಇಲ್ಲೇ ಉಳಿಯಬೇಕೆ ಎಂಬ ಮಾನಸಿಕ ತೊಳಲಾಟಕ್ಕೆ ಸಿಲುಕಿದ್ದಾರೆ.

ಬಿಜೆಪಿಯ ಐದು ಶಾಸಕರನ್ನು ಎಳೆದರೆ ಸರ್ಕಾರ ಸುಭದ್ರ ಮಾಡಿಕೊಳ್ಳಬಹುದು. ಈ ಮೂಲಕ ಮುಖ್ಯಮಂತ್ರಿಯಾಗುವ ಕನಸಿನಲ್ಲಿರುವ ಯಡಿಯೂರಪ್ಪನವರಿಗೆ ಮತ್ತೆ ಶಾಕ್ ನೀಡುವುದು ದೋಸ್ತಿ ಪಕ್ಷಗಳ ಲೆಕ್ಕಾಚಾರವಾಗಿದೆ.

ಪಕ್ಷ ಬಿಟ್ಟು ಹೋದರೆ ರಾಷ್ಟ್ರೀಯ ನಾಯಕರ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ. ನಾಳೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತವೆ. ಕೆಲವು ಕಾರಣಗಳನ್ನು ಮುಂದಿಟ್ಟುಕೊಂಡು ಐಟಿ, ಇಡಿ, ಸಿಬಿಐ ದಾಳಿ ನಡೆಸಿದರೆ ನಮ್ಮ ಗತಿಯೇನು ಎಂಬ ಅಳಕು ಕೂಡ ಇದೆ. ಹೀಗಾಗಿ ಬಿಜೆಪಿಯಲ್ಲೇ ಉಳಿಯಲು ಆಗದೆ, ಹೊರ ಹೋಗಲು ಆಗದೆ ಒಂದಿಷ್ಟು ಭಿನ್ನಮತೀಯರು ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ