ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ತುರ್ತು ಸಭೆ

ಬೆಂಗಳೂರು,ಜು.7- ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಜೆಡಿಎಸ್ ಶಾಸಕಾಂಗ ಪಕ್ಷದ ತುರ್ತು ಸಭೆಯನ್ನು ಇಂದು ಸಂಜೆ ಕರೆಯಲಾಗಿದೆ.

ಅಮೆರಿಕ ಪ್ರವಾಸ ಮುಗಿಸಿ ಮರಳುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಪಿ ಭವನದಲ್ಲಿ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಲಾಗುತ್ತದೆ.

ಜೆಡಿಎಸ್‍ನ ಮೂವರು ಹಾಗೂ ಕಾಂಗ್ರೆಸ್‍ನ 13 ಶಾಸಕರು ರಾಜೀನಾಮೆ ನೀಡಿದ್ದು, ಸರ್ಕಾರಕ್ಕೆ ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ಇಂಥ ಸನ್ನಿವೇಶದಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವುದು ಹೇಗೆ?ಮುಂದೆ ಪಕ್ಷ ಯಾವ ನಿರ್ಧಾರವನ್ನು ಕೈಗೊಳ್ಳಬೇಕು ಎಂಬ ವಿಚಾರಗಳ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ.

ಮೈತ್ರಿ ಸರ್ಕಾರಕ್ಕೆ ಕಂಟಕ ಎದುರಾಗಿರುವ ಬೆನ್ನಲ್ಲೇ ಪಕ್ಷ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಗಂಭೀರ ಚರ್ಚೆ ನಡೆಸಲಾಗುತ್ತದೆ. ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ಮುಂದುವರೆಸಬೇಕೆ ಅಥವಾ ಕೈಬಿಡಬೇಕೆ ಎಂಬ ಬಗ್ಗೆ ಸಮಾಲೋಚನೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಶಾಸಕರು ಸರ್ಕಾರದ ಬಗ್ಗೆ ಅಸಮಾಧಾನಗೊಂಡು ರಾಜೀನಾಮೆ ನೀಡಿರುವುದಾಗಿ ಹೇಳುತ್ತಿದ್ದಾರೆ. ಇನ್ನು ಮತ್ತಷ್ಟು ಶಾಸಕರು ರಾಜೀನಾಮೆ ನೀಡುವ ಹಾದಿಯಲ್ಲಿದ್ದಾರೆ ಎಂಬ ಮಾಹಿತಿಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ನಡೆ ಏನಿರಬೇಕೆಂಬ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.

ಈಗಾಗಲೇ ಕಾಂಗ್ರೆಸ್‍ನ ಕೆಲವರು ಮುಖ್ಯಮಂತ್ರಿ ಸ್ಥಾನದ ಬಗ್ಗೆಯೂ ಪ್ರಸ್ತಾಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟು ಪ್ರಯತ್ನ ಸೇರಿದಂತೆ ಎದುರಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿರುವ ಪರ್ಯಾಯ ಮಾರ್ಗಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ.

ಶಾಸಕರು ರಾಜೀನಾಮೆ ನೀಡಿದ ನಂತರವೂ ಜೆಡಿಎಸ್ ನಾಯಕರು ತಟಸ್ಥ ನಿಲುವನ್ನು ತಳೆದಿದ್ದು, ಕುಮಾರಸ್ವಾಮಿ ಬರುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ