ಹೊಸದಿಲ್ಲಿ: ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ತಾವು ಪ್ರತಿನಿಧಿಸುವ ಸಂಸದೀಯ ಕ್ಷೇತ್ರ ವಾರಾಣಸಿಯಲ್ಲಿ ಚಾಲನೆ ನೀಡಲಿದ್ದಾರೆ.
ಅಂತೆಯೇ, ಅಮಿತ್ ಶಾ ಮತ್ತು ಪಿಯೂಷ್ ಗೋಯಲ್ ಕ್ರಮವಾಗಿ ತೆಲಂಗಾಣ ಮತ್ತು ಗೋವಾದಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಿದ್ದಾರೆ.
ವಾರಾಣಸಿಯಲ್ಲಿ ಸಸಿಗಳನ್ನು ನೆಡುವ ಮೂಲಕ ಪ್ರಧಾನಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ದೇವನಗರಿಯ ಪ್ರವಾಸದಲ್ಲಿ ಮೋದಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪಕ್ಷ ಬೆಳೆಯುವ ಜತೆಗೆ ಪರಿಸರವೂ ಉಳಿಯಬೇಕು ಎನ್ನುವ ಉದಾತ್ತ ಆಶಯ ಹೊಂದಿರುವ ಪ್ರಧಾನಿ, ದೇಶದ ಪ್ರತಿ ಮತಗಟ್ಟೆ ಪ್ರದೇಶದಲ್ಲಿ ಕನಿಷ್ಠ ಐದು ಸಸಿಗಳನ್ನು ನೆಡುವ ಮೂಲಕ ಸದಸ್ಯತ್ವ ಅಭಿಯಾನ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡರಿಗೆ ಕರೆ ನೀಡಿದ್ದಾರೆ.
ಇಂದು ಜನಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನವಾಗಿದ್ದು, ಈ ವಿಶೇಷ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ದೊರೆಯಲಿದೆ.
ಈ ಅಭಿಯಾನವನ್ನು ಅವರು ‘ ಪಂಚವಟಿ‘ ಎಂದು ಹೆಸರಿಸಿದ್ದಾರೆ. ತೆಲಂಗಾಣದಲ್ಲಿ ಪಕ್ಷದ ಮುಖ್ಯಸ್ಥ ಅಮಿತ್ ಶಾ, ಗೋಯಲ್ ಗೋವಾದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಪಕ್ಷದ ಇತರ ಮುಖಂಡರು ವಿವಿಧ ರಾಜ್ಯಗಳಲ್ಲಿ ಅಭಿಯಾನ ಆರಂಭಿಸಲಿದ್ದಾರೆ.