ಬೆಂಗಳೂರು: ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಸಕಲೇಶಪುರ ಶಾಸಕ ಹೆಚ್.ಕೆ. ಕುಮಾರಸ್ವಾಮಿ ಅವರನ್ನು ಇಂದು ನೇಮಕ ಮಾಡಲಾಗುವುದು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಇಂದು ಉತ್ತಮ ದಿನ ಎಂಬ ಕಾರಣಕ್ಕೆ ಬೆಳಗ್ಗೆ ಜೆ.ಪಿ. ಭವನದಲ್ಲಿ ನೂತನ ರಾಜ್ಯಾಧ್ಯಕ್ಷರ ಅಧಿಕೃತ ಘೋಷಣೆ ಮಾಡಲು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡರು ನಿರ್ಧರಿಸಿದ್ದಾರೆ. ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ನೇಮಕವಾಗಲಿದ್ದಾರೆ. ರಾಜ್ಯಾಧ್ತಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಹೆಚ್. ವಿಶ್ವನಾಥ್ ಅವರೇ ಹೆಚ್.ಕೆ. ಕುಮಾರಸ್ವಾಮಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ಹೆಚ್. ವಿಶ್ವನಾಥ್ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ತಮ್ಮ ಮಾತಿಗೆ ಕಿಮ್ಮತ್ತು ದೊರೆಯುತ್ತಿಲ್ಲ ಎಂಬ ಅಸಮಾಧಾನವನ್ನು ಅವರು ಹೊರಹಾಕಿದ್ದರು. ಕಾಂಗ್ರೆಸ್-ಜೆಡಿಎಸ್ ನಡುವೆ ಸಮನ್ವಯತೆ ಸಾಧಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಚಿತವಾಗಿರುವ ಸಮನ್ವಯ ಸಮಿತಿಯಲ್ಲಿ ಉಭಯ ಪಕ್ಷಗಳ ರಾಜ್ಯಾಧ್ಯಕ್ಷರಿಗೂ ಅವಕಾಶ ನೀಡಬೇಕೆಂಬ ವಿಶ್ವನಾಥ್ ಅವರ ಬೇಡಿಕೆ ಈಡೇರಿರಲಿಲ್ಲ.
ಸುಮಾರು ನಾಲ್ಕು ಪುಟಗಳ ರಾಜೀನಾಮೆ ಪತ್ರ ನೀಡಿದ್ದ ಹೆಚ್. ವಿಶ್ವನಾಥ್, ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸಮನ್ವಯ ಸಮಿತಿ ಕೇವಲ ನಾಮಕಾವಸ್ಥೆ. ಸಮನ್ವಯ ಸಮಿತಿ ಸಿದ್ದರಾಮಯ್ಯನವರ ಕೈಗೊಂಬೆಯಾಗಿದೆ. ಸಮನ್ವಯ ಸಮಿತಿಯಲ್ಲಿ ನನಗೆ ಅವಕಾಶವೇ ಕೊಡಲಿಲ್ಲ. ಎಲ್ಲವೂ ಸಿದ್ದರಾಮಯ್ಯನವರ ಆಣತಿಯಂತೆ ನಡೆಯುತ್ತಿತ್ತು ಎಂದು ರಾಜೀನಾಮೆ ಪತ್ರದಲ್ಲಿ ವಿಶ್ವನಾಥ್ ಕಿಡಿಕಾರಿದ್ದರು.
ಇನ್ನು, ನಿನ್ನೆ ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕ ಕುರಿತು ಪ್ರತಿಕ್ರಿಯಿಸಿದ್ದ ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹೆಚ್. ವಿಶ್ವನಾಥ್ ಅವರೇ ಮುಂದುವರೆಯಲಿದ್ದಾರೆ. ಯಾವುದೇ ಕಾರಣಕ್ಕೂ ಅವರು ಪಕ್ಷ ತೊರೆಯುವುದಿಲ್ಲ. ಅವರ ಮಾರ್ಗದರ್ಶನದ ಅಗತ್ಯ ನಮಗಿದೆ ಎಂದು ಹೇಳಿದ್ದರು. ಆದರೆ, ಇಂದು ಹೆಚ್.ಕೆ. ಕುಮಾರಸ್ವಾಮಿ ಅವರ ಹೆಸರನ್ನು ಘೋಷಣೆ ಮಾಡುವುದು ನಿಗದಿಯಾಗಿದೆ. ಹಾಗೇ, ಜೆಡಿಎಸ್ಗೆ ರಾಜೀನಾಮೆ ನೀಡಿ ಹೆಚ್. ವಿಶ್ವನಾಥ್ ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.