ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರ ಕೈವಾಡವಿದೆ

ಬೆಂಗಳೂರು, ಜು.2-ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಇಂದಿಲ್ಲಿ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಕುರಿತಂತೆ ಬಿಜೆಪಿ ನಾಯಕರು ನೀಡಿರುವ ಹೇಳಿಕೆಯ ಧಾಟಿಯನ್ನು ನೋಡಿದರೆ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿರುವುದು ಸಹಜ ಎಂಬುದಕ್ಕೆ ಪುಷ್ಟಿ ದೊರೆಯುತ್ತದೆ ಎಂದರು.

ಸರ್ಕಾರದ ಅಸ್ಥಿರತೆಗೆ ಸಂಬಂಧಿಸಿದಂತೆ ಯಾವುದೇ ಪಕ್ಷ ಅಥವಾ ನಾಯಕರು ಬೆಂಬಲಿಸಬಾರದು. ಅದು ಆರೋಗ್ಯಕರ ಬೆಳವಣಿಗೆಯಾಗುವುದಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರೆದಿದ್ದು, ಅದರ ಕಡೆ ಅಧಿಕಾರಿ ಹಾಗೂ ಸರ್ವರ ಗಮನ ಇರಬೇಕು. ರಾಜೀನಾಮೆ ಕೊಟ್ಟಂಗೆ ಅಥವಾ ಕೊಡದಂಗೆ ಮಾಡುವುದು ಆರೋಗ್ಯಕರ ಬೆಳವಣಿಗೆಯಲ್ಲ. ಕಳೆದ ಆರೇಳು ತಿಂಗಳುಗಳಿಂದಲೂ ರಾಜೀನಾಮೆ ಕೊಡುತ್ತೇವೆ, ಸರ್ಕಾರವನ್ನು ಕೆಡುವುತ್ತೇವೆ, ಅಮಾವಾಸ್ಯೆ ದಿನ ರಾಜೀನಾಮೆ ಕೊಡುವುದು ಬೇಡ ಎಂಬೆಲ್ಲಾ ವಿಚಾರಗಳು ಕೆಟ್ಟ ರಾಜಕಾರಣಕ್ಕೆ ದಾರಿ ಮಾಡಿಕೊಡಲಿವೆ. ಕಾಂಗ್ರೆಸ್ ಪಕ್ಷದ ನಿಷ್ಠರ್ಯಾರೂ ಕೂಡ ಸರ್ಕಾರ ಪತನಗೊಳಿಸುವ ಮಾತನ್ನು ಆಡಬಾರದು.ವಿರೋಧ ಪಕ್ಷವೂ ಕೂಡ ಅರಾಜಕತೆಯನ್ನು ಉಂಟು ಮಾಡಬಾರದು. ಜು.12ರಿಂದ ಅಧಿವೇಶನ ನಡೆಯಲಿದೆ. ಸರ್ಕಾರದ ಬಹುಮತ ಪರೀಕ್ಷೆ ಬೇಕಾದರೆ ಮಾಡಬಹುದು ಎಂದು ಹೇಳಿದರು.

ರಾಜೀನಾಮೆ ವಾಪಸ್ ಪಡೆಯಬೇಕು:
ಜಿಂದಾಲ್ ಕಂಪನಿಗೆ ಜಮೀನು ನೀಡುವ ವಿಚಾರ ಮುಂದಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್‍ಸಿಂಗ್ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಬೇಕು. ಈ ವಿಚಾರದಲ್ಲಿ ಅವಸರ ಪಡಬಾರದು. ಜಿಂದಾಲ್ ಕಂಪನಿಗೆ ಶುದ್ಧ ಕ್ರಯಕ್ಕೆ ಜಮೀನು ನೀಡುವ ಸಂಪುಟ ಸಭೆಯ ತೀರ್ಮಾನವನ್ನು ಸರ್ಕಾರ ಸ್ಥಗಿತಗೊಳಿಸಿದೆ. ಸಚಿವ ಸಂಪುಟ ಉಪಸಮಿತಿಯನ್ನು ಗೃಹ ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಹೀಗಾಗಿ ಸಂಪುಟ ಉಪಸಮಿತಿ ಪರಿಶೀಲಿಸಿ ವರದಿ ನೀಡುವವರೆಗೂ ಆತಂಕ ಪಡುವ ಅಗತ್ಯವಿಲ್ಲ. ಸಮಿತಿ ಬಗ್ಗೆ ಅಪನಂಬಿಕೆ ಬೇಡ. ರಾಜ್ಯಕ್ಕೆ ಮಾರಕವಾಗದ ರೀತಿಯಲ್ಲಿ ಸಂಪುಟ ಉಪಸಮಿತಿ ಶಿಫಾರಸು ಮಾಡುವ ವಿಶ್ವಾಸವಿದೆ. ನಮಗೆ ಲಭ್ಯವಿರುವ ಮಾಹಿತಿ, ದಾಖಲೆಗಳನ್ನು ಸಮಿತಿಗೆ ಒದಗಿಸಿದರೆ ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯವಿದೆ. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಸಮಿತಿ ಸಮಯ ಮತ್ತು ದಿನಾಂಕವನ್ನು ನಿಗದಿ ಮಾಡಬೇಕು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ