ಜಾತಿ ವ್ಯವಸ್ಥೆಯನ್ನು ತೊಲಗಿಸಲು ಬುದ್ಧನ ಕಾಲದಿಂದಲೂ ಪ್ರಯತ್ನ ನಡೆಯುತ್ತಿದೆ-ಮಾಜಿ ಸಿಎಂ.ಸಿದ್ದರಾಮಯ್ಯ

ಬೆಂಗಳೂರು, ಜು.2-ಅಂಬೇಡ್ಕರ್ ಅಲ್ಲದೆ ಬೇರೆ ಇನ್ಯಾರಾದರೂ ಸಂವಿಧಾನ ರಚನೆ ಸಮಿತಿ ಅಧ್ಯಕ್ಷರಾಗಿದ್ದರೆ ಸಮ ಸಮಾಜದ ಆಶಯವನ್ನು ಅಳವಡಿಸುತ್ತಿರಲಿಲ್ಲ. ಮೋದಿಯವರು ಹೇಳಿದರು.

ಪುರಭವನದಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ವಾರ್ಷಿಕ ಸಮ್ಮೇಳನ ಮತ್ತು ಮಿಲ್ಲರ್ ಆಯೋಗದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆಯಿಂದಾಗಿ ಅಸ್ಪೃಶ್ಯತೆ, ಅಸಮಾನತೆ ಇದೆ. ಜಾತಿ ವ್ಯವಸ್ಥೆ ಆಳವಾಗಿ ಬೇರು ಬಿಟ್ಟಿದೆ. ಇದನ್ನು ತೊಲಗಿಸಲು ಬುದ್ಧನ ಕಾಲದಿಂದಲೂ ಪ್ರಯತ್ನ ನಡೆಯುತ್ತಲೇ ಇದೆ. ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಮಹಾನ್ ದಾರ್ಶನಿಕರು ಪ್ರಯತ್ನಿಸಿದ್ದಾರೆ. 1902ರಲ್ಲಿ ಸಾಹು ಮಹಾರಾಜ್ ಮೊದಲ ಬಾರಿಗೆ ಮೀಸಲಾತಿ ವ್ಯವಸ್ಥೆ ಜಾರಿಗೆ ತಂದರು. ಅನಂತರ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1918ರಲ್ಲಿ ಮಿಲ್ಲರ್ ಆಯೋಗ ರಚನೆ ಮಾಡಿ, 1919ರಲ್ಲಿ ವರದಿ ಪಡೆದು 1921ರಲ್ಲಿ ಜಾರಿಗೆ ತಂದರು.

ಬ್ರಾಹ್ಮಣೇತರರಿಗೆ ಶೇ.75 ಮೀಸಲಾತಿ ನೀಡಿದರು. ಅದಕ್ಕೂ ಮೊದಲು ಎಲ್ಲಾ ಸೌಲಭ್ಯಗಳನ್ನು ಒಂದು ವರ್ಗ ಮಾತ್ರ ಅನುಭವಿಸುತ್ತಿತ್ತು. ಈ ಮೊದಲು ಎಲ್ಲಾ ಸಮಾಜಕ್ಕೂ ಶಿಕ್ಷಣ ಇರಲಿಲ್ಲ. ಬ್ರಿಟಿಷರು 1937ರಲ್ಲಿ ಕಾನೂನು ರೂಪಿಸಿ ಶಿಕ್ಷಣ ನೀಡಲು ಮುಂದಾದರು. 1957ರಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಜಾರಿಗೆ ಬಂದ ಬಳಿಕ ಎಲ್ಲರಿಗೂ ಶಿಕ್ಷಣ ಕಡ್ಡಾಯಗೊಂಡಿದೆ.

ಮೇಲ್ಜಾತಿಯವರು ಸಂವಿಧಾನ ಸಮಿತಿ ಅಧ್ಯಕ್ಷರಾಗಿದ್ದರೆ ಮೀಸಲಾತಿಯನ್ನು ನಿರೀಕ್ಷಿಸುವಂತಿರಲಿಲ್ಲ. ಹಾಗಾಗಿ ಈಗಲೂ ಕೆಲವು ಪಟ್ಟಭದ್ರರು ಸಂವಿಧಾನದ ವಿರುದ್ಧವಾಗಿ ಮಾತನಾಡುತ್ತಾರೆ. ಒಂದಿಬ್ಬರು ಹೇಳಿಕೆಗಳನ್ನು ನೀಡುತ್ತಾರೆ ಎಂದಾಕ್ಷಣ ನಾವು ನಿರ್ಲಕ್ಷಿಸಬಾರದು, ಸಂವಿಧಾನ ಮುಟ್ಟಲು ಬಿಡಬಾರದು, ಸಂವಿಧಾನ ಮುಟ್ಟಿದರೆ ರಕ್ತಪಾತವಾಗುತ್ತದೆ ಎಂಬುದನ್ನು ಅರ್ಥ ಮಾಡಿಸಬೇಕು. ಇಲ್ಲವಾದರೆ ಇವರು ಸಂವಿಧಾನ ಬದಲಾವಣೆ ಮಾಡೇ ಬಿಡುತ್ತಾರೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ