ಕಲಬುರ್ಗಿ : ನಕ್ಸಲರ ವಿರುದ್ಧದ ಕಾರ್ಯಾಚರಣೆ ವೇಳೆ ಕಲಬುರ್ಗಿ ಮೂಲದ ಯೋಧ ಹುತಾತ್ಮರಾಗಿದ್ದು, ಇಂದು ಸಂಜೆ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಛತ್ತೀಸ್ಗಢ ಬಿಜಾಪುರ ಜಿಲ್ಲೆಯ ಜಗದಲ್ಪುರ ಬಳಿ ನಡೆದ ನಕ್ಸಲ್ ದಾಳಿಯಲ್ಲಿ ಸಿಆರ್ಪಿಎಫ್ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ಕಾರ್ಯಾಚರಣೆ ವೇಳೆ ಬಾಂಬ್ ಸ್ಫೋಟಗೊಂಡು ಮೂವರು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅವರಲ್ಲಿ ಕರ್ನಾಟಕದ ಕಲಬುರ್ಗಿ ಮೂಲದ ಮಹದೇವ ಪಾಟೀಲ (50) ಕೂಡ ಒಬ್ಬರು.
ಕಳೆದ 29 ವರ್ಷಗಳಿಂದ ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹದೇವ ಪಾಟೀಲ ತಮ್ಮ ಮಗಳ ಸೀಮಂತಕ್ಕೆಂದು ಇಂದು ಊರಿಗೆ ಬರುವವರಿದ್ದರು. ಆದರೆ, ನಿನ್ನೆ ನಡೆದ ನಕ್ಸಲ್ ದಾಳಿಯಲ್ಲಿ ಅವರು ಸಾವನ್ನಪ್ಪಿರುವುದಕ್ಕೆ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಇಂದು ಹೈದರಾಬಾದ್ ಮೂಲಕ ಮರಗುತ್ತಿ ಗ್ರಾಮಕ್ಕೆ ಪಾರ್ಥೀವ ಶರೀರ ರವಾನೆಯಾಗಲಿದೆ. ಇಂದು ಸಂಜೆ 3 ಗಂಟೆಗೆ ಗ್ರಾಮ ತಲುಪುವ ಸಾಧ್ಯತೆಯಿದ್ದು, ಗ್ರಾಮದ ಶಾಲೆ ಆವರಣ ಅಥವಾ ಹುತಾತ್ಮ ಯೋಧನ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಕುರಿತು ಅಧಿಕಾರಿಗಳ ಚರ್ಚೆ ನಡೆಸಿದ್ದಾರೆ.
ಛತ್ತೀಸ್ಗಢದ ಕೇಶ್ಕುಟುಲ್ ಗ್ರಾಮದ ಬಳಿ ನಿನ್ನೆ ನಕ್ಸಲರು ಅವಿತಿರುವ ಮಾಹಿತಿ ಪಡೆದ ಸಿಆರ್ಪಿಎಫ್ ಸಿಬ್ಬಂದಿ ಬೈಕ್ನಲ್ಲಿ ಕಾರ್ಯಾಚರಣೆಗೆ ಹೊರಟಿದ್ದರು. ಆಗ ಏಕಾಏಕಿ ಗುಂಡಿನ ದಾಳಿ ನಡೆಸಿದ ನಕ್ಸಲರ ಮೇಲೆ ಯೋಧರೂ ಪ್ರತಿದಾಳಿ ನಡೆಸಿದರು. ಈ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ.