90 ಕೋಟಿಯ ಜಾಗ 9.38 ಕೋಟಿಗೆ ಮಾರಾಟ: ಜಮೀರ್ ವಿರುದ್ಧ ಅಕ್ರಮದ ಆರೋಪ

ಬೆಂಗಳೂರು: 90 ಕೋಟಿ ಬೆಲೆಬಾಳುವ ನಿವೇಶನವನ್ನು ಐಎಂಎಗೆ 9.38 ಕೋಟಿ ರೂ.ಗಳಿಗೆ ಮಾರಾಟ ಮಾಡಿ, ಬಾಕಿ 80 ಕೋಟಿ ರೂ.ಗಳನ್ನು ಹವಾಲಾ ರೂಪದಲ್ಲಿ ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷ ನಾಯಕ, ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ಸಚಿವ ಜಮೀರ್ ಅಹಮದ್ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 90 ಕೋಟಿ ರೂ. ಮೌಲ್ಯದ ನಿವೇಶನವನ್ನು ಕೇವಲ 9.38 ಕೋಟಿ ರೂ.ಗೆ ಮಾರಾಟ ಮಾಡಿದ್ದು, ಉಳಿದ 80 ಕೋಟಿ ರೂ.ಗಳನ್ನು ಕಪ್ಪು ಹಣ ಹವಾಲಾ ರೂಪದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪಡೆದಿದ್ದಾರೆ. ವಿವಾದಿತ ನಿವೇಶನವನ್ನು ಅಕ್ರಮ ಮಾರಾಟ ಮಾಡಿ ಉಳಿದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. 2001ರಲ್ಲಿ ಕೇವಲ ಎರಡೂವರೆ ಕೋಟಿ ರೂ.ಗೆ ನಿವೇಶನವನ್ನು ಖರೀದಿಸಿ ಅಕ್ರಮವಾಗಿ ಐಎಂಎಗೆ ಮಾರಾಟ ಮಾಡಿದ್ದಾರೆ ಎಂದು ಎನ್. ರಮೇಶ್ ದೂರಿದ್ದಾರೆ.

ಭೂ ಮಾಲೀಕನಿಗೆ ಕೇವಲ ಎರಡೂವರೆ ಕೋಟಿ ರೂ.ಗಳನ್ನು ನೀಡಿ ಜಮೀನು ಖರೀದಿಸಿದ್ದು, ಅದೇ ಜಮೀನನ್ನು 9 ಕೋಟಿ ರೂ.ಗೆ ಐಎಂಎ ಮಾಲೀಕನಿಗೆ ಮಾರಾಟ ಮಾಡಿದ್ದಾರೆ. ಆದರೆ ಆ ಜಮೀನಿನ ಸದ್ಯದ ಮಾರುಕಟ್ಟೆ ಬೆಲೆ ಕನಿಷ್ಟ 90 ಕೋಟಿ ರೂ.ಗಳಾಗಿದ್ದು, 2018ರಲ್ಲಿ ಮನ್ಸೂರ್ ಖಾನ್‍ಗೆ ಕೇವಲ 9.38 ಕೋಟಿ ರೂ.ಗೆ ಜಮೀರ್ ಅಹ್ಮದ್ ಖಾನ್ ಮಾರಾಟ ಮಾಡಿದ್ದಾರೆ. ಉಳಿದ 80 ಕೋಟಿ ರೂ. ಕಪ್ಪು ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

19 ವರ್ಷಗಳಿಂದ ರಿಚ್ಮಂಡ್ ಟೌನ್‍ನ ಸರ್ಪಟೈನ್ ಸ್ಟ್ರೀಟ್‍ನಲ್ಲಿರುವ ವಿವಾದಿತ ನಿವೇಶನ ಕೋರ್ಟ್ ಅಂಗಳದಲ್ಲಿದ್ದು, 2014ರಲ್ಲಿ ಆಸ್ತಿ ಪ್ರಕರಣ ಕೋರ್ಟ್‍ನಲ್ಲಿರುವಾಗಲೇ ಜಮೀರ್ ಪಾಲಿಕೆಗೆ ಪತ್ರ ಬರೆದು ಆಸ್ತಿಯನ್ನು ನಾನು ಖರೀದಿಸಿದ್ದೇನೆ ಖಾತೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. ಆಗಲೇ ಪಾಲಿಕೆ ನೌಕರರು ಈ ಆಸ್ತಿ ವ್ಯಾಜ್ಯ ಕೋರ್ಟ್‍ನಲ್ಲಿದೆ ಹೀಗಾಗಿ ಖಾತೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಹೀಗಿದ್ದರೂ ಸಹ ಹತ್ತು ಹಲವು ಬಾರಿ ಪತ್ರ ವ್ಯವಹಾರ ನಡೆಸಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.

ತಾವು ಖಾತೆ ಮಾಡಿಸಿದ ನಂತರ ಮನ್ಸೂರ್ ಖಾನ್‍ಗೆ ಮಾರಾಟ ಮಾಡಿರುವ ಜಮೀನಿಗೆ ಖಾತೆ ಮಾಡಿಸಲು ಜಮೀರ್ ಕಸರತ್ತು ಮಾಡಿದ್ದಾರೆ. ಸಚಿವ ಜಮೀರ್ ಸುಳ್ಳು ಲೆಕ್ಕ ಕೊಡುವುದರಲ್ಲಿ ಎಕ್ಸ್‍ಪರ್ಟ್. ಚುನಾವಣಾ ಪ್ರಮಾಣಪತ್ರದಲ್ಲೇ ತಪ್ಪು ಮಾಹಿತಿ ನೀಡಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೂ ಮಾಜಿ ಶಾಸಕ ಚೆಲುವರಾಯ ಸ್ವಾಮಿಯಿಂದ 42 ಲಕ್ಷ ಸಾಲ ಪಡೆದಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ, ಚೆಲುವರಾಯ ಸ್ವಾಮಿ ಅದೇ 2018ರ ವಿಧಾನಸಭಾ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಜಮೀರ್ ಅಹ್ಮದ್ ಖಾನ್ ಸಾಲ ನೀಡಿರುವ ಮಾಹಿತಿಯನ್ನೇ ನೀಡಿಲ್ಲ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ