ಬೆಂಗಳೂರು: ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಇಂದು ಹೊರಬೀಳಲಿದೆ.
ಪ್ರಕರಣದಲ್ಲಿ ತನ್ನನ್ನು ವಿಚಾರಣೆ ಮಾಡದೇ ಕೈಬಿಡಬೇಕು ಎಂದು ಕೋರಿ ಸಚಿವ ಡಿ.ಕೆ. ಶಿವಕುಮಾರ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ತೀರ್ಪನ್ನು ಕಾಯ್ದಿರಿಸಿದ್ದರು. ಆ ತೀರ್ಪು ಇಂದು ಹೊರಬೀಳಲಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯ ಫ್ಲ್ಯಾಟ್ಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಐಟಿ ದಾಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ನನ್ನನ್ನು ಕೈಬಿಡಬೇಕು’ ಎಂದು ಕೋರಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
2018ರ ಆಗಸ್ಟ್ನಲ್ಲಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಐಟಿ ಇಲಾಖೆ ದೂರು ನೀಡಿತ್ತು. ತೆರಿಗೆ ವಂಚನೆ, ಹವಾಲ, ಹೈಕಮಾಂಡ್ ಗೆ ಕಪ್ಪ ಸೇರಿ ಹಲವು ಆರೋಪಗಳನ್ನು ಐಟಿ ಇಲಾಖೆ ಮಾಡಿತ್ತು. ದೆಹಲಿಯಲ್ಲಿ ಸಿಕ್ಕ 8.56 ಕೋಟಿ ಹಣದ ಕುರಿತು ತನಿಖೆ ಮಾಡಿದ್ದ ಐಟಿ ಅಧಿಕಾರಿಗಳು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ದೂರು ದಾಖಲಾಗುತ್ತಿದ್ದಂತೆ ಜಾಮೀನು ಪಡೆದುಕೊಂಡಿದ್ದ ಡಿಕೆಶಿ ನಂತರ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಮೊದಲ 3 ಪ್ರಕರಣಗಳಲ್ಲಿ ಆರೋಪ ಮುಕ್ತರಾಗಿರುವ ಸಚಿವ ಡಿಕೆಶಿ ತಮ್ಮನ್ನು ನಾಲ್ಕನೇ ಪ್ರಕರಣದಲ್ಲಿಯೂ ಆರೋಪಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದರು.
ಈ ಕುರಿತಂತೆ ಸ್ಪೆಷಲ್ ಕೋರ್ಟ್ಗೆ( ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲ) ಶಿವಕುಮಾರ್ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ವಕೀಲರು, ‘ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕು’ ಎಂದು ನ್ಯಾಯಾಧೀಶರನ್ನು ಕೋರಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದರು. ಅಲ್ಲದೇ ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದರು. ಈ ಪ್ರಕರಣದಲ್ಲಿ ಇ.ಡಿ, ಶಿವಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120-‘ಬಿ’ (ಅಪರಾಧಿಕ ಒಳಸಂಚು) ಅನುಸಾರ ಪ್ರಕರಣ ದಾಖಲಿಸಿದೆ. ಅಂತೆಯೇ ಆದಾಯ ತೆರಿಗೆ ಕಾಯ್ದೆ-1961ರ ಕಲಂ 276 ಸಿ (1) ಮತ್ತು 277ರ ಪ್ರಕಾರ ದಂಡನೀಯ ಅಪರಾಧ ಎಸಗಿದ್ದಾರೆ’ ಎಂದೂ ಆರೋಪಿಸಲಾಗಿದೆ.