ನವದೆಹಲಿ: ಶ್ವಾನದೊಂದಿಗೆ ಶ್ವಾನ ಸೇನೆ ವಿಭಾಗವು ಯೋಗಾಸನ ಮಾಡಿದ ಫೋಟೋವನ್ನು ‘ಇದು ನವ ಭಾರತ’ ಎಂಬ ವ್ಯಂಗ್ಯ ಶೀರ್ಷಿಕೆ ನೀಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ಭಾರಿ ಆಕ್ಷೇಪಕ್ಕೆ ಕಾರಣವಾಗಿದೆ. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘ಒಂದು ಟ್ವೀಟ್ನಿಂದ ಇವರು ನಮ್ಮ ಸೇನೆ, ಶ್ವಾನ ಸೇನೆ ಹಾಗೂ ಯೋಗಕ್ಕೆ ಅವಮಾನ ಮಾಡಿದ್ದಾರೆ’ ಎಂದಿದೆ.
‘ಇದು ನವಭಾರತವೇ. ಆದರೆ ರಾಹುಲ್ ಮಾತ್ರ ಬದಲಾಗಿಲ್ಲ. ಭಾರತ, ಭಾರತದ ಸಂಪ್ರದಾಯ, ಸೇನೆಯನ್ನು ಅವಮಾನ ಮಾಡುತ್ತಲೇ ಇದ್ದಾರೆ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದ್ದಾರೆ. ಒಂದೆಡೆ ತ್ರಿವಳಿ ತಲಾಖ್ನಂತಹ ಪದ್ಧತಿಯನ್ನು ಬೆಂಬಲಿಸುವ ಕಾಂಗ್ರೆಸ್, ಯೋಗ ದಿನವನ್ನು ಅವಮಾನ ಮಾಡುತ್ತದೆ.
ಇದು ಕಾಂಗ್ರೆಸ್ನ ಋಣಾತ್ಮಕ ಚಿಂತನೆಯನ್ನು ಪ್ರದರ್ಶಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟೀಕಿಸಿದ್ದಾರೆ. ಜತೆಗೆ, ಧನಾತ್ಮಕ ಚಿಂತನೆಯು ಯಾವತ್ತೂ ಉಳಿಯುತ್ತದೆಂಬ ವಿಶ್ವಾಸವಿದೆ. ಎಷ್ಟೇ ಕಠಿಣ ಸವಾಲುಗಳಿದ್ದರೂ ಅದನ್ನು ಎದುರಿಸುವ ಶಕ್ತಿಯನ್ನು ಸಕಾರಾತ್ಮಕ ಚಿಂತನೆಗಳು ನೀಡುತ್ತದೆ ಎಂದೂ ಟ್ವೀಟ್ನಲ್ಲಿ ಹೇಳಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿ, ‘ಇದನ್ನು ಖಂಡಿಸಲು ನನ್ನಲ್ಲಿ ಪದಗಳೇ ಇಲ್ಲ. ನಮ್ಮದೇ ಸಶಸ್ತ್ರ ಪಡೆಗಳನ್ನು ಅವಮಾನಿಸುತ್ತಾರೆ ಎಂದರೆ ನಂಬಲು ಸಾಧ್ಯವಿಲ್ಲ. ಆದರೆ, ಸೇನೆಯನ್ನು ಅವಮಾನಿಸುವುದು, ನಿಂದಿಸುವುದು ಕಾಂಗ್ರೆಸ್ ಪಕ್ಷಕ್ಕೆ ಹೊಸತಲ್ಲವಲ್ಲ’ ಎಂದು ಬರೆದುಕೊಂಡಿದ್ದಾರೆ. ಬಿಜೆಪಿಯ ಮತ್ತೂಬ್ಬ ವಕ್ತಾರರಾದ ನಳಿನ್ ಕೊಹ್ಲಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವ ಭಾರತ ಸೃಷ್ಟಿಯಾಗಿರುವುದು ನಿಜ. ಆದರೆ, ಕಾಂಗ್ರೆಸ್ ಅಧ್ಯಕ್ಷರು ಮಾಡಿರುವ ಟ್ವೀಟ್, ರಾಹುಲ್ ನೇತೃತ್ವದಲ್ಲಿ ಸೃಷ್ಟಿಯಾಗಿರುವ ಹೊಸ ಕಾಂಗ್ರೆಸ್ ಅನ್ನು ಪ್ರದರ್ಶಿಸಿದೆ. ಬಹುಶಃ ರಾಹುಲ್ಗೆ, ಇಡೀ ಜೀವನವೇ ಜೋಕ್ ಇದ್ದಂತೆ’ ಎಂದು ಟ್ವೀಟ್ ಮಾಡಿದ್ದಾರೆ.