ಟಿಟಿಡಿ ಮಂಡಳಿಯ ಮುಖ್ಯಸ್ಥರಾಗಿ ಆಂಧ್ರ ಸಿಎಂ ಜಗನ್​ ಮೋಹನ್​ ಚಿಕ್ಕಪ್ಪ ನೇಮಕ

ಹೈದರಬಾದ್: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್​ ರೆಡ್ಡಿ ತನ್ನ ಚಿಕ್ಕಪ್ಪ ಹಾಗೂ ವೈಎಸ್​ಆರ್​ಸಿಪಿ ಮುಖಂಡ ವೈ.ವಿ.ಸುಬ್ಬಾ ರೆಡ್ಡಿ ಅವರನ್ನು ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನಂ) ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.

ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಮನಮೋಹನ್​ ಸಿಂಗ್ ಅವರು ಸಿಎಂ ಆದೇಶದಂತೆ ಸುಬ್ಬಾ ರೆಡ್ಡಿ ಅವರಿಗೆ ಟಿಟಿಡಿ ಮಂಡಳಿಯ ಮುಖ್ಯಸ್ಥ ಸ್ಥಾನ ನೀಡಿದ್ದಾರೆ.

ಸುಬ್ಬಾ ರೆಡ್ಡಿ ವೈಎಸ್​ಆರ್​ಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜೊತೆಗೆ ಆಂಧ್ರ ಪ್ರದೇಶ ಸಿಎಂ ಜಗನ್​ ಮೋಹನ್​ ರೆಡ್ಡಿ ಅವರಿಗೆ ಹತ್ತಿರದ ಸಂಬಂಧಿಯೂ ಆಗಿದ್ದಾರೆ. ಈಗ ಟಿಟಿಡಿ ಮುಖ್ಯಸ್ಥರಾಗಿ ಜೂನ್​ 22 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಟಿಟಿಡಿ ಮಂಡಳಿಗೆ ಇನ್ನಷ್ಟು ಸದಸ್ಯರು ಶೀಘ್ರದಲ್ಲೇ ನೇಮಕಗೊಳ್ಳಲಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿಂಗ್​ ತಿಳಿಸಿದ್ದಾರೆ.

ಟಿಡಿಪಿ ನಾಯಕ ಪುಟ್ಟ ಸುಧಾಕರ್​ ಯಾದವ್​ ಟಿಟಿಡಿ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಗುರುವಾರ ತಮ್ಮ ರಾಜೀನಾಮೆ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವೈಎಸ್​​ಆರ್​ ಕಾಂಗ್ರೆಸ್​ ಗೆಲುವು ಸಾಧಿಸಿದ ಬಳಿಕ, ಟಿಟಿಡಿ ಮಂಡಳಿಯ 10 ಮಂದಿ ಸದಸ್ಯರು ತಾವಾಗಿಯೇ ಟ್ರಸ್ಟ್​ನಿಂದ ಹೊರಬಂದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ