ನವದೆಹಲಿ: ಉತ್ತರಪ್ರದೇಶದ ಸಮಾಜವಾದಿ ಪಕ್ಷ(ಎಸ್ಪಿ) ಮತ್ತು ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ನಡುವೆ ಮಾಡಿಕೊಳ್ಳಲಾಗಿದ್ದ ಮೈತ್ರಿ ಬಹುತೇಕ ಮುರಿದಿದೆ. ಈ ಬಗ್ಗೆ ಎರಡೂ ಪಕ್ಷಗಳು ಮಂಗಳವಾರ ಘೋಷಿಸಿವೆ. ಎಸ್ಪಿ-ಬಿಎಸ್ಪಿ ಮೈತ್ರಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನುಡಿದಿದ್ದ ಭವಿಷ್ಯ ನಿಜವಾಗಿದೆ. ಪ್ರಧಾನಿ ಮೋದಿ ಎಪ್ರಿಲ್ 20 ರಂದು ಈಟಾದಲ್ಲಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ, ಮೇ 23 ರಂದು ಎಸ್ಪಿ-ಬಿಎಸ್ಪಿ ಮೈತ್ರಿ ಮುರಿಯಲಿದೆ ಎಂದಿದ್ದರು.
ಮತ್ತೊಂದೆಡೆ, ಬಿಜೆಪಿ ಟ್ವಿಟ್ಟರ್ ಹ್ಯಾಂಡಲ್ನಿಂದ ಪ್ರಧಾನಿ ಮೋದಿ ಅವರ ಈಟಾ ರ್ಯಾಲಿ ವೀಡಿಯೊವನ್ನು ಟ್ವೀಟ್ ಮಾಡಿರುವ ಬಿಜೆಪಿ ‘ಇದು ಸಂಭವಿಸಬೇಕಿತ್ತು’ ಎಂದು ಬರೆದುಕೊಂಡಿದೆ.
ಬಿಜೆಪಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರಈಟಾ ರ್ಯಾಲಿ ವಿಡಿಯೋದಲ್ಲಿ ಪ್ರಧಾನಿ ಮೋದಿ ಹೀಗೆ ಹೇಳುತ್ತಾರೆ, “ಸಹವರ್ತಿಗಳೇ, ಒಂದು ಸರ್ಕಾರವು ಪ್ರಬಲ ಸರ್ಕಾರ ಮತ್ತು ಪ್ರಬಲ ಭಾರತದ ಬಗ್ಗೆ ಕನಸು ಕಾಣಬಹುದು. ಟೊಳ್ಳಾದ ಭರವಸೆಗಳನ್ನು ನೀಡುತ್ತಾ ಟೊಳ್ಳು ಸ್ನೇಹ ಪ್ರದರ್ಶಿಸುವವರ ಬಗ್ಗೆ ನಿಮಗೆ ಚೆನ್ನಾಗಿಯೇ ತಿಳಿದಿದೆ. ಚುನಾವಣೆಗಳು ನಡೆಯುತ್ತಿವೆ ಮತ್ತು ಚುನಾವಣೆ ಅಂತ್ಯಗೊಂಡಂತೆ ಅವರಿಬ್ಬರ ನಡುವಿನ ಈ ಟೊಳ್ಳು ಸ್ನೇಹ ಕೊನೆಗೊಳ್ಳಲಿದೆ. ಒಬ್ಬರ ವಿರುದ್ಧ ಒಬ್ಬರು ಹಗೆ ಸಾಧಿಸುತ್ತಿದ್ದವರು ಇಂದು ಮೈತ್ರಿ ಮಂತ್ರ ಜಪಿಸುತ್ತಿದ್ದಾರೆ. ಈ ಮೈತ್ರಿ ಕೊನೆಗೊಳ್ಳುವ ದಿನಾಂಕ ಕೂಡ ನಿಗದಿಪಡಿಸಲಾಗಿದೆ. ಈ ನಕಲಿ ಸ್ನೇಹವು ಮೇ 23 ಗುರುವಾರ ಮುರಿಯಲಿದೆ” ಎಂದಿದ್ದರು.