ಬೆಂಗಳೂರು: ದಳಪತಿ ಸಾಮ್ರಾಜ್ಯದಲ್ಲೀಗ ಯುವರಾಜನ ಪಟ್ಟದ ಸಾರಥಿ ಯಾರಾಗುತ್ತಾರೆ ಅನ್ನೋ ಕುತೂಹಲ ಮೂಡಿದೆ. ಮಂಡ್ಯ ಕದನದ ಬಳಿಕ ನಿಖಿಲ್ ಬಣ್ಣದ ಜಗತ್ತಿಗೆ ಗುಡ್ ಬೈ ಹೇಳುವಂತೆ ಅಭಿಮಾನಿಗಳ ಒತ್ತಡ ಹಾಕುತ್ತಿದ್ದಾರೆ. ಹಾಗಾದರೆ ಯುವರಾಜನ ಕಿರೀಟ ಸೋತಿರುವ ಗೌಡ್ರ ಗಿಫ್ಟ್ ನಿಖಿಲ್ಗಾ, ಗೆದ್ದು ಬೀಗಿದ ಪ್ರಜ್ವಲ್ಗಾ ಅನ್ನೋ ಸ್ಪೆಷಲ್ ಸ್ಟೋರಿ ಇಲ್ಲಿದೆ.
ಹೌದು. ಒಂದೇ ಒಂದು ಸೀಟು, ತನ್ನ ಸೋಲು ಮೊಮ್ಮಗನ ಪರಾಭವ ಇವೆಲ್ಲವೂ ಮಾಜಿ ಪ್ರಧಾನಿ ದೇವೇಗೌಡ್ರನ್ನು ಕಂಗೆಡಿಸಿದೆ. ಪಕ್ಷದ ಬಲವರ್ಧನೆಯ ಬಗ್ಗೆ ಚಿಂತೆ ಮಾಡುತ್ತಿರುವ ಗೌಡ್ರು ಈಗ ದಳಪತಿ ಸಾಮ್ರಾಜ್ಯದ ಯುವರಾಜ ಪಟ್ಟವನ್ನು ಮಧುಬಂಗಾರಪ್ಪರ ಬದಲು ಮೊಮ್ಮಕ್ಕಳಿಗೆ ನೀಡಲು ಉತ್ಸುಕತೆ ತೋರಿದ್ದಾರೆ. ಆದರೆ ಇದೀಗ ನಿಖಿಲ್ ಅಥವಾ ಪ್ರಜ್ವಲ್ ಇಬ್ಬರಲ್ಲಿ ಯಾರಿಗೆ ಯುವಘಟಕದ ಅಧ್ಯಕ್ಷ ಸ್ಥಾನ ನೀಡೋದು ಅನ್ನೋದು ಪ್ರಶ್ನೆಯಾಗಿದೆ.
ಪಕ್ಷ ಸಂಘಟನೆಯಲ್ಲಿ ಪ್ರಜ್ವಲ್ ಆಸಕ್ತಿ ತೋರಿರುವುದರಿಂದ ಪ್ರಜ್ವಲ್ ಹೆಸರು ಚಾಲ್ತಿಯಲ್ಲಿದ್ದರೂ ಸೋತು ಧೃತಿಗೆಟ್ಟ ಮೊಮ್ಮಗ ನಿಖಿಲ್ ಭವಿಷ್ಯವೂ ಗೌಡ್ರ ಕಣ್ಣಮುಂದಿದೆ. ಹೀಗಾಗಿ ಗೌಡ್ರು ಅದ್ಯಾರಿಗೆ ಕಿರೀಟವನ್ನು ಹಾಕೋದು ಅನ್ನುವ ಬಗ್ಗೆ ಕುಟುಂಬ ಹಾಗೂ ಜೆಡಿಎಸ್ ಆಪ್ತನಾಯಕರ ಬಳಿ ಸಮಾಲೋಚನೆಗೈದಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಬಣ್ಣದ ಜಗತ್ತಿಗೆ ಗುಡ್ ಬೈ!
ಸೋತಬಳಿಕವೂ ನಿಖಿಲ್ ಸುಮಲತಾ ಹಾಗೂ ಅಭಿಷೇಕ್ಗೆ ಹಾರೈಸಿದ ಪರಿ, ಮಂಡ್ಯದ ಜನರ ಜೊತೆ ಸದಾ ಇರುತ್ತೇನೆ ಅಂದಿರುವ ಭರವಸೆ ನಿಖಿಲ್ ಇಮೇಜ್ ಬದಲಾಯಿಸಿದೆ. ನಿಖಿಲ್ ನಡೆ ಒಬ್ಬ ಪ್ರಬುದ್ಧ ರಾಜಕಾರಣಿಯಂತಿದೆ. ನೀವು ಸಿನಿಮಾ ಬಿಟ್ಟಾಕಿ, ರಾಜಕೀಯದ ಅಖಾಡದಲ್ಲಿ ಫುಲ್ ಟೈಂ ತೊಡಗಿಸಿಕೊಳ್ಳಿ ಎಂದು ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಬೆಂಬಲಿಗರ ಮನವಿಯನ್ನು ನಿಖಿಲ್ ಸಿರಿಯಸ್ ಆಗಿ ತೆಗೆದುಕೊಂಡರೆ, ಜೆಡಿಎಸ್ ಯುವ ಸಾರಥಿಯಾದರೆ ಕುರುಕ್ಷೇತ್ರ ಕೊನೆಯ ಸಿನಿಮಾವಾಗಲಿದೆ. ನಿಖಿಲ್ ಸಂಪೂರ್ಣವಾಗಿ ಬಣ್ಣದ ಜಗತ್ತಿನಿಂದ ಹೊರಬರುತ್ತಾರೆ ಎಂಬ ಸುದ್ದಿ ಹರಿದಾಡಿದೆ.
ಒಟ್ಟಿನಲ್ಲಿ ಕುಟುಂಬ ರಾಜಕಾರಣದ ಇಮೇಜ್ನಿಂದ ಜೆಡಿಎಸ್ ಸಾಮ್ರಾಜ್ಯ ಹೊರಬರೋದು ಅಸಾಧ್ಯ ಅನ್ನುವ ವಿಶ್ಲೇಷಣೆ ಮಧ್ಯೆ ಈಗ ಯುವ ಘಟಕದ ಸಾಮ್ರಾಜ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಸದ್ಯ ನಿಖಿಲ್ ನಡೆ ಏನು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.