ನವದೆಹಲಿ,ಮೇ 8-ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೌಕಿದಾರ್ ಚೋರ್ ಹೆ ಎಂಬ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಗುರಿಯಾಗಿ ನ್ಯಾಯಾಲಯ ನಿಂದನೆ ನೋಟಿಸ್ ಜಾರಿಗೆ ಒಳಗಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಇಂದು ಸುಪ್ರೀಂಕೋರ್ಟ್ ಮುಂದೆ ಬೇಷರತ್ ಕ್ಷಮೆ ಕೋರಿದ್ದಾರೆ.
ಈ ಪ್ರಕರಣ ಕುರಿತು ಮೇ 10ರಂದು ಶುಕ್ರವಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುವುದಕ್ಕೂ ಮುನ್ನವೇ ರಾಹುಲ್ ಬೇಷರತ್ ಕ್ಷಮೆ ಕೋರಿ ಈ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.
ಈ ಹಿಂದೆ ಸುಪ್ರೀಂಕೋರ್ಟ್ಗೆ ಅಫಿಡೆವಿಟ್ ಸಲ್ಲಿಸಿದ್ದ ರಾಹುಲ್ ತಮ್ಮ ಹೇಳಿಕೆಗೆ ತಾವು ವಿಷಾದಿಸುವುದಾಗಿ ಹೇಳಿ ಕ್ಷಮೆ ಕೋರಿಕೆ ಕುರಿತು ನೇರವಾಗಿ ಪ್ರಸ್ತಾಪಿಸದೆ ಸಮತೋಲನ ಕಾಯ್ದುಕೊಂಡಿದ್ದರು. ಆದರೆ ಇಂದು ನೇರವಾಗಿ ಬೇಷರತ್ ಕ್ಷಮೆ ಕೋರಿ ತಮ್ಮ ಪ್ರಮಾದವನ್ನು ಮನ್ನಿಸುವಂತೆ ಮನವಿ ಮಾಡಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠಕ್ಕೆ ಇಂದು ಮೂರು ಪುಟಗಳ ಪ್ರಮಾಣಪತ್ರ ಸಲ್ಲಿಸಿರುವ ರಾಹುಲ್, ತಮ್ಮ ಹೇಳಿಕೆ ಉದ್ದೇಶಪೂರ್ವಕವಲ್ಲ ಮತ್ತು ಪ್ರಮಾದವಶಾತ್ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ನಾನು ನನ್ನ ಹೇಳಿಕೆಗೆ ಬೇಷರತ್ ಕ್ಷಮೆ ಕೋರುತ್ತಿದ್ದೇನೆ. ನನ್ನ ವಿರುದ್ದ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸಲ್ಲಿಸಿರುವ ನ್ಯಾಯಾಲಯ ನಿಂದನೆ ಮನವಿ ಅರ್ಜಿಗಳ ಬಗ್ಗೆ ಮುಂದಿನ ವಿಚಾರಣೆ ನಡೆಸದೆ ಇಲ್ಲಿಗೆ ಕೊನೆಗೊಳಿಸಬೇಕು ಎಂದು ರಾಹುಲ್ ಅಫಿಡಾವಿಟ್ನಲ್ಲಿ ಕೋರಿದ್ದಾರೆ.
ಫ್ರಾನ್ಸ್ನಿಂದ ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಕುರಿತು ಏಪ್ರಿಲ್ 10ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಸವೋಚ್ಛ ನ್ಯಾಯಾಲಯವು ಕೂಡ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಚೌಕಿದಾರ್ ಚೋರ್ ಹೆ ಎಂದು ಪರಿಗಣಿಸಿದೆ ಎಂಬುದಾಗಿ ಹೇಳಿಕೆ ನೀಡಿದ್ದರು.
ಅವರ ಈ ಹೇಳಿಕೆಗೆ ಬಿಜೆಪಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿತ್ತು. ಸಂಸದೆ ಮೀನಾಕ್ಷಿ ಲೇಖಿ ಈ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಕಾಂಗ್ರೆಸ್ ನಾಯಕನ ವಿರುದ್ಧ ನ್ಯಾಯಾಲಯ ನಿಂದನೆ ಅನ್ವಯ ಕ್ರಮ ಜರುಗಿಸಬೇಕೆಂದು ಕೋರಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಹುಲ್ ಅವರಿಗೆ ನ್ಯಾಯಾಲಯ ನಿಂದನೆ ನೋಟಿಸ್ ಜಾರಿಗೊಳಿಸಿ ಪ್ರತ್ಯುತ್ತರ ನೀಡುವಂತೆ ಸೂಚಿಸಿತ್ತು.
ರಫೇಲ್ ಒಪ್ಪಂದ ಕುರಿತ ಮರುಪರಿಶೀಲನಾ ಅರ್ಜಿ ಮತ್ತು ರಾಹುಲ್ ಪ್ರಕರಣ ಕುರಿತು ಮೇ 10ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.
ಇದಕ್ಕೂ ಮುನ್ನವೇ ಕಾಂಗ್ರೆಸ್ ಅಧ್ಯಕ್ಷರು ಬೇಷರತ್ ಕ್ಷಮೆ ಕೋರಿರುವುದರಿಂದ ಅವರು ನ್ಯಾಯಾಲಯ ನಿಂದನೆ ಆರೋಪದಿಂದ ಮುಕ್ತರಾಗುವ ಸಾಧ್ಯತೆ ಇದೆ.
ಮೀನಾಕ್ಷಿ ಲೇಖಿ ಪ್ರತಿಕ್ರಿಯೆ:
ಕೊನೆಗೂ ರಾಹುಲ್ಗಾಂಧಿ ಅವರು ಬೇಷರತ್ ಕ್ಷಮೆ ಕೋರಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಜಿದಾರರಾದ ಮೀನಾಕ್ಷಿ ಲೇಖಿ, ನೀವು ಓಡಿಹೋಗಬಹುದು. ಆದರೆ ನಿಮ್ಮ ಹೇಳಿಕೆಯನ್ನು ಬಚ್ಚಿಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಕೊನೆಗೂ ಸುಪ್ರೀಂಕೋರ್ಟ್ನ ಕ್ಷಮೆ ಕೋರಿದ್ದಾರೆ. ನ್ಯಾಯಾಲಯದ ಮುಂದೆ ಯಾರೂ ದೊಡ್ಡವರಲ್ಲ ಎಂದು ಹೇಳಿ ಕ್ಷಮೆಯಾಚನೆ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.