ಹೈವೋಲ್ಟೇಜ್ ಕಣವಾದ ಶಿವಮೊಗ್ಗ ಕ್ಷೇತ್ರ

ಶಿವಮೊಗ್ಗ, ಏ.20- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಹಾಲಿ ಸಂಸದ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಿಎಂ ದಿವಂಗತ ಎಸ್.ಬಂಗಾರಪ್ಪ ಪುತ್ರ, ಮಾಜಿ ಶಾಸಕ ಮಧು ಬಂಗಾರಪ್ಪ ಮೈತ್ರಿಕೂಟದ ಹುರಿಯಾಳಾಗಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎದುರಾಳಿಗಳಾಗಿದ್ದ ಈ ಇಬ್ಬರು ಮಾಜಿ ಸಿಎಂಗಳ ಪುತ್ರರು ಸಾರ್ವತ್ರಿಕ ಚುನಾವಣೆಯಲ್ಲಿಯೂ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ.

ಈ ಇಬ್ಬರು ಘಟಾನುಘಟಿ ಯುವ ನಾಯಕರ ಸ್ಪರ್ಧೆ ಹಾಗೂ ಗೆಲುವಿಗೆ ಪರಸ್ಪರ ನಡೆಸುತ್ತಿರುವ ಪೈಪೋಟಿಯ ಕಾರಣದಿಂದಲೇ, ಶಿವಮೊಗ್ಗ ಕ್ಷೇತ್ರ ಹೈವೋಲ್ಟೇಜ್ ಕಣವಾಗಿದೆ.

ಪ್ರಸ್ತುತ ಚುನಾವಣೆಯಲ್ಲಿ ಒಟ್ಟಾರೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಆದರೆ ಬಿಜೆಪಿ-ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಉಪ ಚುನಾವಣೆ ರೀತಿಯಲ್ಲಿಯೇ ಕ್ಷೇತ್ರದಲ್ಲಿ ಪ್ರಚಾರದ ಅಬ್ಬರ ಕಾವೇರಿದೆ.ಪ್ರಮುಖ ಅಭ್ಯರ್ಥಿಗಳಿಬ್ಬರು ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತು ಹಾಕುತ್ತಿದ್ದಾರೆ.

ಎರಡೂ ಕಡೆಯಿಂದಲೂ ಆರೋಪ-ಪ್ರತ್ಯಾರೋಪಗಳ ವಿನಿಮಯವಾಗುತ್ತಿದೆ.

ಮೂರು ಎಲೆಕ್ಷನ್: 2014 ರ ಲೋಕಸಭೆ ಚುನಾವಣೆಯಲ್ಲಿ ಒಟ್ಟಾರೆ 11,29,008 ಜನರು ತಮ್ಮ ಹಕ್ಕು ಚಲಾಯಿಸಿದ್ದು, ಶೇ. 72.27 ರಷ್ಟು ಮತದಾನವಾಗಿತ್ತು. ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ 6,06,216, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ 2,42,911, ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್‍ಕುಮಾರ್ 2,40,636 ಮತ ಪಡೆದಿದ್ದರು. 3,63,305 ಮತಗಳ ಅಂತರದಲ್ಲಿ ಬಿಜೆಪಿ ಜಯ ಸಾಧಿಸಿತ್ತು.

2018 ರ ಅಕ್ಟೋಬರ್-ನವೆಂಬರ್‍ನಲ್ಲಿ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 5,43,306 ಮತ ಪಡೆದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ 4,91,158 ಮತ ಪಡೆದಿದ್ದರು. 2014 ರ ಚುನಾವಣೆಗೆ ಹೋಲಿಸಿದರೆ, ಉಪ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆ ಕಡಿಮೆಯಾಗಿತ್ತು.3.63 ಲಕ್ಷದಷ್ಟಿದ್ದ ಲೀಡ್ 52 ಸಾವಿರಕ್ಕೆ ಕುಸಿದಿತ್ತು.

ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ 7 ಕಡೆ ಬಿಜೆಪಿ ಹಾಗೂ 1 ಕಡೆ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ.ಜೆಡಿಎಸ್ ಸಾಧನೆ ಶೂನ್ಯವಾಗಿದೆ. ಬೈಂದೂರು ಹೊರತುಪಡಿಸಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 11,13,309 ಜನರು ಮತದಾನ ಮಾಡಿದ್ದರು. ಇದರಲ್ಲಿ ಬಿಜೆಪಿ ಅಭ್ಯರ್ಥಿಗಳು 4,87,403, ಕಾಂಗ್ರೆಸ್ 3,56,450 ಹಾಗೂ ಜೆಡಿಎಸ್ 2,49,723 ಹಾಗೂ ಇತರೆ ಅಭ್ಯರ್ಥಿಗಳು 19,733 ಮತ ಗಳಿಸಿದ್ದರು.

ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಟ್ಟು 6,06,173 ಮತಗಳನ್ನು ಪಡೆದಿದ್ದವು. ಇದು ಬಿಜೆಪಿಗಿಂತ 1,18,770 ಅಧಿಕವಾಗಿವೆ. ಆದರೆ ಕಳೆದ ಉಪ ಚುನಾವಣೆಯಲ್ಲಿ ಮೈತ್ರಿಕೂಟ ವಿಧಾನಸಭಾ ಕ್ಷೇತ್ರದಲ್ಲಿ ಇಷ್ಟು ಮತಗಳನ್ನು ಪಡೆದಿರಲಿಲ್ಲ. ಬಿಜೆಪಿ ಮತಗಳಿಕೆ ಏರಿಕೆಯಾಗಿದ್ದುದು ಕಂಡುಬಂದಿತ್ತು.

ಮತ ಲೆಕ್ಕಾಚಾರ: ಕಳೆದ ಎರಡು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಮತ ಗಳಿಕೆ ಲೆಕ್ಕಾಚಾರ ಗಮನದಲ್ಲಿಟ್ಟುಕೊಂಡರೇ, ಜಯ ತನ್ನದೆ ಎಂದು ಬಿಜೆಪಿ ಹೇಳುತ್ತಿದೆ. ಕ್ಷೇತ್ರದಲ್ಲಿ ಪಕ್ಷದ ಪ್ರಾಬಲ್ಯವಿದೆ.ಸಂಘಟನೆ ಸದೃಢವಾಗಿದೆ.ಈ ಕಾರಣದಿಂದ 1, 2 ಲಕ್ಷ ಮತಗಳ ಅಂತರದಲ್ಲಿ ಜಯ ಸಾಧಿಸುತ್ತೇವೆ ಎಂದು ಬಿಜೆಪಿ ನಾಯಕರು ಆತ್ಮವಿಶ್ವಾಸದ ಮಾತುಗಳನ್ನಾಡುತ್ತಿದ್ದಾರೆ.

ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿಯ ಲೆಕ್ಕಗಳು ಉಲ್ಟಾವಾಗಲಿದೆ ಎಂದು ಮೈತ್ರಿಕೂಟ ವಿಶ್ವಾಸದಲ್ಲಿದೆ.2014 ಲೋಕಸಭೆ, 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆಯಿತ್ತು. ಕಳೆದ ಐದು ತಿಂಗಳ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಏರ್ಪಟ್ಟರೂ ಪ್ರಚಾರಕ್ಕೆ ಸೂಕ್ತ ಸಮಯಾವಕಾಶ ದೊರಕಲಿಲ್ಲ. ಎರಡೂ ಕಡೆ ಗೊಂದಲವಿತ್ತು.ಆದಾಗ್ಯೂ ಉತ್ತಮ ಮತಗಳಿಕೆ ಮಾಡಿದ್ದೇವೆ. ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಮೈತ್ರಿಕೂಟ ಪ್ರಚಾರ ನಡೆಸುತ್ತಿದೆ.ಕನಿಷ್ಠವೆಂದರೂ 50 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸುತ್ತೇವೆ ಎಂದು ಜೆಡಿಎಸ್-ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

ಜಾತಿ ಲೆಕ್ಕಾಚಾರ: ಜಾತಿ – ಧರ್ಮಾಧಾರಿತ ಮತಗಳಿಕೆ ಲೆಕ್ಕಾಚಾರಗಳು ಜೋರಾಗಿಯೇ ನಡೆಯುತ್ತಿವೆ. ಕ್ಷೇತ್ರದಲ್ಲಿ ಈಡಿಗ, ಲಿಂಗಾಯಿತ, ಮುಸ್ಲಿಂ, ಬ್ರಾಹ್ಮಣ, ಒಕ್ಕಲಿಗ, ಮರಾಠ, ಪರಿಶಿಷ್ಟ ಸಮುದಾಯದ ಮತದಾರರ ಸಂಖ್ಯೆ ಹೆಚ್ಚಿದೆ. ಮೈತ್ರಿಕೂಟ ಅಹಿಂದ ಮತಗಳ ಮೇಲೆ ಕಣ್ಣಿರಿಸಿದೆ.ಈ ಮತಗಳ ಕ್ರೋಢೀಕರಣಕ್ಕೆ ಕಾರ್ಯತಂತ್ರ ನಡೆಸುತ್ತಿದೆ.ಜಾತ್ಯತೀತ ಮತಗಳ ಧೃವೀಕರಣ ಹಾಗೂ ಅಲ್ಪಸಂಖ್ಯಾತ ಸಮುದಾಯ ಕೈ ಹಿಡಿಯುವ ನಿರೀಕ್ಷೆಯಲ್ಲಿದೆ.

ಬಿಜೆಪಿ ಬ್ರಾಹ್ಮಣ, ಲಿಂಗಾಯಿತ ಸಮುದಾಯಗಳ ಮತಗಳತ್ತ ಚಿತ್ತ ನೆಟ್ಟಿದೆ.ಜಾತಿಯ ಜೊತೆಗೆ ಧರ್ಮಧಾರಿತ ಮತ ಗಳಿಕೆಯ ಯೋಜನೆಯಲ್ಲಿದೆ. ಬಿಜೆಪಿಗೆ ತಳಮಟ್ಟದ ಸಂಘಟನೆ ಪ್ರಮುಖ ಶಕ್ತಿಯಾಗಿದೆ.ಆ ಪಕ್ಷದ ಕಾರ್ಯಕರ್ತರು ಮತದಾರರ ಮನೆ ಮನೆಗೆ ಭೇಟಿ ನೀಡುವಲ್ಲಿ ಮುಂದಿದ್ದಾರೆ.ಸಭೆ-ಸಮಾರಂಭಗಳ ಜೊತೆಗೆ ಮತದಾರರ ಮನೆಗೆ ತಲುಪುವ ಕಾರ್ಯ ನಡೆಸುತ್ತಿದೆ.ಆದರೆ ಮೈತ್ರಿಕೂಟದಲ್ಲಿ ಬಿಜೆಪಿಗೆ ಸರಿಸಮಾನವಾಗಿ ಸಭೆ-ಸಮಾರಂಭಗಳು ನಡೆಯುತ್ತಿವೆಯಾದರೂ, ಮತದಾರರ ಮನೆ ತಲುಪುವ ಕಾರ್ಯ ಅಷ್ಟೊಂದು ಪರಿಣಾಮಕಾರಿಯಾಗಿ ನಡೆಯದಿರುವುದು ಕಂಡುಬರುತ್ತಿದೆ.

ಒಟ್ಟಾರೆ ಕ್ಷೇತ್ರದ ಚಿತ್ರಣ ಗಮನಿಸಿದರೆ, ಬಿಜೆಪಿ – ಮೈತ್ರಿಕೂಟದ ನಡುವೆ ಭಾರೀ ಹೋರಾಟವೇ ಏರ್ಪಟ್ಟಿದೆ.ನೇರಾನೇರ ಹಣಾಹಣಿ ಕಂಡುಬಂದಿದೆ.ಯಾರೇ ಗೆದ್ದರೂ ಅಂತರ ಕಡಿಮೆಯಿರಲಿದೆ ಎಂಬ ಲೆಕ್ಕಾಚಾರಗಳು ಕಂಡುಬರುತ್ತಿವೆ.

ಮೋದಿ ಪರ – ವಿರುದ್ಧ ಚರ್ಚೆ ಬಿರುಸು!
ಕಳೆದ ಚುನಾವಣೆಗಳಲ್ಲಿ ರಾಷ್ಟ್ರ-ರಾಜ್ಯದ ಜೊತೆಜೊತೆಗೆ ಕ್ಷೇತ್ರದ ಸ್ಥಳೀಯ ವಿಷಯಗಳು ಹಾಗೂ ಅಭ್ಯರ್ಥಿಗಳ ಸಾಧನೆ ಮತ್ತೀತರ ಅಂಶಗಳು ಪ್ರಚಾರದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದ್ದವು.ಆದರೆ ಪ್ರಸ್ತುತ ಶಿವಮೊಗ್ಗ ಕ್ಷೇತ್ರದ ಪ್ರಚಾರ ಕಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸ್ಥಳೀಯ ಅಂಶಗಳಿಗೆ ಅಷ್ಟೊಂದು ಪ್ರಾಮುಖ್ಯತೆ ಸಿಗುತ್ತಿಲ್ಲ. ನರೇಂದ್ರ ಮೋದಿ ಪರ – ವಿರುದ್ಧದ ಚರ್ಚೆಗಳೇ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಬಿಜೆಪಿಯು ನರೇಂದ್ರ ಮೋದಿಯನ್ನೇ ಮುಂದಿಟ್ಟುಕೊಂಡು ಮತಯಾಚನೆ ನಡೆಸುತ್ತಿದೆ.ದೇಶದ ಭದ್ರತೆ ಸುಭದ್ರವಾಗಿರಬೇಕಾದರೆ, ಮೋದಿ ಮತ್ತೆ ಪ್ರಧಾನಿಯಾಗಬೇಕು.ಈ ಕಾರಣದಿಂದ ಬಿಜೆಪಿಗೆ ಮತ ಹಾಕಿ ಎಂದು ಹೇಳುತ್ತಿದೆ. ಮತ್ತೊಂದೆಡೆ ಮೈತ್ರಿಕೂಟ ಮತ್ತೆ ಮೋದಿ ಪ್ರಧಾನಿಯಾಗಬಾರದು ಎನ್ನುವ ಮೂಲಕ ಮೈತ್ರಿಕೂಟದ ಅಭ್ಯರ್ಥಿಗೆ ಮತ ಹಾಕಿ ಎಂದು ಪ್ರಚಾರ ಮಾಡುತ್ತಿದೆ.

ಚರ್ಚೆಯಾಗದ ಸ್ಥಳೀಯ ವಿಷಯಗಳು:
ಕ್ಷೇತ್ರದಲ್ಲಿ ಹತ್ತು ಹಲವು ಗಂಭೀರ ಸಮಸ್ಯೆಗಳಿವೆ. ಅರಣ್ಯ ಭೂಮಿ ಸಾಗುವಳಿ ಒತ್ತುವರಿ ತೆರವು, ಪಶ್ಚಿಮಘಟ್ಟ ಸಂರಕ್ಷಣೆ, ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು, ಭದ್ರಾವತಿಯ ವಿಐಎಸ್‍ಎಲ್, ಎಂಪಿಎಂ ಕಾರ್ಖಾನೆಗಳ ಸಮಸ್ಯೆ, ಮಂಗನ ಕಾಯಿಲೆಯಂತಹ ಗಂಭೀರ ವಿಷಯಗಳ ಬಗ್ಗೆ ಚುನಾವಣಾ ಪ್ರಚಾರ ಕಣದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಚರ್ಚೆಯಾಗುತ್ತಿಲ್ಲ.

ತಾವು ಆಯ್ಕೆಯಾದರೇ ಕೇಂದ್ರ ಸರ್ಕಾರದಿಂದ ಕ್ಷೇತ್ರಕ್ಕೆ ಏನೆಲ್ಲ ಯೋಜನೆ ತರುತ್ತೇವೆ? ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಕೈಗೊಳ್ಳುವ ಕ್ರಮಗಳೇನು?ಎಂಬ ವಿಷಯಗಳ ಬಗ್ಗೆಯೂ ಅಭ್ಯರ್ಥಿಗಳು ಮಾತನಾಡುತ್ತಿಲ್ಲ.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಬಿಜೆಪಿ : ಬಿ.ವೈ.ರಾಘವೇಂದ್ರ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ : ಮಧು ಬಂಗಾರಪ್ಪ

ಮತದಾರರ ವಿವರ
ಒಟ್ಟು : 16,75,975
ಪುರುಷರು : 8,31,185
ಮಹಿಳೆಯರು : 8,44,740
ಇತರೆ : 50

ವಿಧಾನಸಭೆ ಬಲಾಬಲ
ಒಟ್ಟು 8 ವಿಧಾನಸಭಾ ಕ್ಷೇತ್ರಗಳು.
ಬಿಜೆಪಿ : ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ, ತೀರ್ಥಹಳ್ಳಿ, ಸಾಗರ, ಸೊರಬ, ಬೈಂದೂರು.
ಕಾಂಗ್ರೆಸ್ : ಭದ್ರಾವತಿ.
ಜೆಡಿಎಸ್ : ಶೂನ್ಯ.

ಉಪ ಚುನಾವಣೆ ಮತ ವಿವರ
ಬಿಜೆಪಿ – ಬಿ.ವೈ.ರಾಘವೇಂದ್ರ 5,43,306
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಧು ಬಂಗಾರಪ್ಪ – 4,91,158

2014 ರ ಲೋಕಸಭೆ ಎಲೆಕ್ಷನ್ ಮತ ವಿವರ
ಬಿಜೆಪಿ – ಬಿ.ಎಸ್.ಯಡಿಯೂರಪ್ಪ : 6,06,216
ಕಾಂಗ್ರೆಸ್ – ಮಂಜುನಾಥ ಭಂಡಾರಿ : 2,42,911
ಜೆಡಿಎಸ್ – ಗೀತಾ ಶಿವರಾಜ್‍ಕುಮಾರ್ : 2,40,636

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ