ಸ್ವಂತ ಶಕ್ತಿಯಿಂದ ಗೆದ್ದರೆ ಮಾತ್ರ ಸಿ.ಎಂ.ಆಗುತ್ತೇನೆ-ಮಾಜಿ ಸಿ.ಎಂ. ಸಿದ್ದರಾಮಯ್ಯ

ಬೆಳಗಾವಿ,ಏ.20-ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಸಿದ್ದರಾಮಯ್ಯ ಅವರು ಕಳೆದೆರಡು ದಿನಗಳಿಂದಲೂ ತಾವೇ ಮುಂದಿನ ಮುಖ್ಯಮಂತ್ರಿ ಎಂಬ ಅರ್ಥದಲ್ಲಿ ಮಾತನಾಡಲಾರಂಭಿಸಿದ್ದರು.ಇದು ಬಿಜೆಪಿ ನಾಯಕರಿಗೆ ಹೊಸ ಅಸ್ತ್ರಕೊಟ್ಟಂತಾಗಿತ್ತು.

ಮೈತ್ರಿ ಸರ್ಕಾರದಲ್ಲಿ ಒಗ್ಗಟ್ಟಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಸಿದ್ದರಾಮಯ್ಯ ಅವರನ್ನು ಪದಚ್ಯುತಿ ಗೊಳಿಸಿ ಮತ್ತೆ ಮುಖ್ಯಮಂತ್ರಿಯಾಗುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿದ್ದವು. ಬಿಜೆಪಿ ನಾಯಕರು ಚುನಾವಣಾ ಪ್ರಚಾರದಲ್ಲಿ ಇದನ್ನು ಪ್ರಮುಖವಾಗಿ ಪ್ರಸ್ತಾಪಿಸಲಾರಂಭಿಸಿದರು.

ಸಹಜವಾಗಿಯೇ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಲಾರಂಭಿಸಿದ್ದರಿಂದ ಇಂದು ಬೆಳಗಾವಿಯಲ್ಲಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ನಾನು ಈಗಲೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಲ್ಲ. ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದರೆ ಆಗ ನಾನು ಮುಖ್ಯಮಂತ್ರಿಯಾಗುತ್ತೇನೆ. ಅನ್ನಭಾಗ್ಯ ಯೋಜನೆಯಡಿ ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಎಂದು ಹೇಳಿದ್ದೇನೆ. ಈಗ 7 ಕೆಜಿ ಅಕ್ಕಿ ಕೊಡಲಾಗುತ್ತಿದೆ ಅದನ್ನು 10 ಕೆಜಿಗೆ ಏರಿಸಲು ಸಾಧ್ಯವಿಲ್ಲವೇ?ಎಂದು ಸಿದ್ದರಾಮಯ್ಯ ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.

ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಪೆದ್ದು ಪೆದ್ದಾಗಿ ಏನೇನೋ ಮಾತನಾಡುತ್ತಾರೆ. ಸ್ವಂತ ಶಕ್ತಿಯಿಂದ ಗೆದ್ದರೆ ಸಿಎಂ ಆಗುತ್ತೇನೆ ಎಂದಿದ್ದೇನೆ ಹೊರತು ಕುಮಾರಸ್ವಾಮಿಯವರನ್ನು ಇಳಿಸಿ ಸಿಎಂ ಆಗುತ್ತೇನೆ ಎಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಿಯಾಂಕ ಗಾಂಧಿ ಹಣೆಗೆ ಕುಂಕುಮ ಇಡುವುದಿಲ್ಲ. ರಾಹುಲ್ ಗಾಂಧಿ ಎಲೆಕ್ಷನ್ ಭಕ್ತರು, ಸಿದ್ದು ಆತ್ಮ ಕೊಪ್ಪಳದಲ್ಲಿದೆ ಎಂಬ ಸಂತೋಷ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಸೋಲಿನ ಹತಾಶೆಯಿಂದ ಬಿಜೆಪಿ ನಾಯಕ ಸಂತೋಷ್ ಅವರು ಏನೇನೋ ಬಡಬಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಡಬಲ್ ಡಿಜಿಟ್ ದಾಟುವುದಿಲ್ಲ ಎಂದು ತಿರುಗೇಟು ನೀಡಿದರು.

ನನ್ನ ಆತ್ಮ ನನ್ನ ಹೃದಯದಲ್ಲಿದೆ. ಎಲ್ಲಾ ಕಡೆ ಇರಲು ನಾನೇನು ದೇವರಾ? ಸೋಲಿನ ಹತಾಶೆ ಅವರನ್ನು ಕಾಡುತ್ತಿರುವುದರಿಂದ ಬುದ್ಧಿ ಇಲ್ಲದೆ ಬಿಜೆಪಿ ನಾಯಕರು ಏನೇನೋ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈಶ್ವರಪ್ಪ ಒಬ್ಬ ಪೆದ್ದ. ಅವರ ಹೇಳಿಕೆಗೆ ಉತ್ತರಿಸುವುದಿಲ್ಲ ಎಂದರು.

ಬಿಜೆಪಿಯವರ ಕಡೆ ಬೆರಳು ಮಾಡಿ ತೋರಿಸುವವರ ಬೆರಳು ಕತ್ತರಿಸುತ್ತೇವೆ ಎಂದು ಬಿಜೆಪಿಯ ಮನೋಜ್‍ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಮಾನವೀಯತೆ ಇಲ್ಲ, ಮನುಷ್ಯರೇ ಅಲ್ಲ, ರಾಕ್ಷಸರು ಎಂದು ಕಿಡಿಕಾರಿದರು.

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಸರ್ಜಿಕಲ್ ಸ್ಟ್ರೈಕ್ ಇದೇ ಮೊದಲಲ್ಲ. ಮೋದಿ ಹೋಗಿ ಗನ್ ಹಿಡಿದುಕೊಂಡು ಸ್ಟ್ರೈಕ್ ಮಾಡಿದ್ರಾ?ಸೈನಿಕರ ಸಾಧನೆಯನ್ನು ಬಿಜೆಪಿ ಚುನಾವಣೆಗೆ ಬಳಸಿಕೊಳ್ಳುತ್ತಿರುವುದು ಅತ್ಯಂತ ಅಕ್ಷಮ್ಯ ಅಪರಾಧ ಎಂದು ಸಿದ್ದರಾಮಯ್ಯ ಹೇಳಿದರು.

ಲೋಕಸಭೆ ಚುನಾವಣೆಯ ಪ್ರಚಾರದ ಪ್ರವಾಸ ಮುಂದುವರೆಸಿ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಂದಿನ ಚುನಾವಣೆಯಲ್ಲಿ ಸಿಎಂ ಆಗುತ್ತೇನೆ ಎಂದು ಹೇಳಿದ್ದರೆ, ಅದನ್ನು ತಿರುಚಲಾಗಿದೆ. ನಾನೇನು ರಾಜಕೀಯ ಸನ್ಯಾಸಿಯಲ್ಲ. ಬಿಸಿಲಿನಲ್ಲಿ ಬಂದು ಪ್ರಚಾರ ಮಾಡುತ್ತಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲಬರುತ್ತದೆ.ಆಗ ನಾವು ಸ್ವಂತ ಬಲದ ಮೇಲೆ ಸರ್ಕಾರ ರಚಿಸುತ್ತೇವೆ. ಆ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ