ತುಮಕೂರು ಕ್ಷೇತ್ರದಲ್ಲಿ ಶಾಂತಿಯುತವಾಗಿ ನಡೆದ ಚುನಾವಣೆ-ಸಾರ್ವಜನಿಕರಿಂದ ಪ್ರಶಂಸೆ

ತುಮಕೂರು ಕ್ಷೇತ್ರದಲ್ಲಿ ಶಾಂತಿಯುತವಾಗಿ ನಡೆದ ಚುನಾವಣೆ-ಸಾರ್ವಜನಿಕರಿಂದ ಪ್ರಶಂಸೆತುಮಕೂರು, ಏ.20- ಈ ಬಾರಿಯ ತುಮಕೂರು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಗಲಾಟೆ ಹೊರತುಪಡಿಸಿ ಅತ್ಯಂತ ಶಾಂತಿಯುತವಾಗಿ ಚುನಾವಣೆ ನಡೆದಿರುವ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಭರಪೂರ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯಲ್ಲಿ ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ರಾಕೇಶ್‍ಕುಮಾರ್ ಅವರನ್ನು ತುಮಕೂರು ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು.

ಮೈಸೂರಿನ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೋನವಂಶಿಕೃಷ್ಣ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿ ಇಲ್ಲಿಗೆ ಕಳುಹಿಸಿತ್ತು.

ಈ ಇಬ್ಬರು ಅಧಿಕಾರಿಗಳು ಜಿಲ್ಲೆಗೆ ಹೊಸಬರಾದರೂ ಕೂಡಾ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ.

ಎಲ್ಲಿಯೂ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕಾರ್ಯನಿರ್ವಹಿಸಿದ್ದಾರೆ.

ಮಧುಗಿರಿ, ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತುಮಕೂರು ನಗರವನ್ನು ಜಿಲ್ಲಾಧಿಕಾರಿಗಳು ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಿದ್ದರು. ಆದರೆ, ಈ ಯಾವುದೇ ಭಾಗದಲ್ಲೂ ಯಾವುದೇ ಅವಘಡ, ಗಲಭೆ ನಡೆಯದಂತೆ ಮುಂಜಾಗ್ರತೆ ವಹಿಸಿ ಯಶಸ್ವಿಯಾಗಿ ಚುನಾವಣೆ ನಡೆಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರು ಅಧಿಕಾರಿಗಳಿಗೆ ಪ್ರಶಂಸೆಗಳ ಸುರಿಮಳೆಯೇ ಹರಿದಿದೆ.

ಜಿಲ್ಲಾಧಿಕಾರಿಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್‍ಪಿಗಳ ಇನ್ಸ್‍ಪೆಕ್ಟರ್‍ಗಳು, ಸಬ್‍ಇನ್ಸ್‍ಪೆಕ್ಟರ್‍ಗಳು, ಸಿಬ್ಬಂದಿಗಳು ಸಾಥ್ ನೀಡಿದ್ದರಿಂದ ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭರಪೂರ ಕೃತಜ್ಞತೆಗಳು ವ್ಯಕ್ತವಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ