ಬೀಜಿಂಗ್: ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿದ್ದು, ಜೈಷೆ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪ್ರಸ್ತಾವಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ವಿಶೇಷ ಸಭೆ ನಡೆಸಲಿದ್ದಾರೆ.
ಉಗ್ರ ಅಜರ್ನನ್ನು ಉಗ್ರರ ಪಟ್ಟಿಗೆ ಸೇರಿಸುವ ನಿರ್ಣಯಕ್ಕೆ ಪದೇ ಪದೇ ಅಡ್ಡಗಾಲು ಹಾಕುತ್ತಿರುವ ಚೀನಾ ಕೂಡ ಜಾಗತಿಕ ಸಮುದಾಯದ ಮುಂದೆ ಒತ್ತಡಕ್ಕೆ ಸಿಲುಕಿದೆ. ಇನ್ನು ಬಹಳ ಕಾಲ ಇದೇ ತಂತ್ರವನ್ನು ಮುಂದುವರಿಸಲು ಚೀನಾಗೂ ಸಾಧ್ಯವಾಗದಷ್ಟು ಜಾಗತಿಕ ಒತ್ತಡ ಹೆಚ್ಚಿದೆ.
ಈ ಪರಿಸ್ಥಿತಿಯಲ್ಲಿ ಸನ್ನಿವೇಶವನ್ನು ನಿಭಾಯಿಸುವ ಕಾರ್ಯತಂತ್ರದ ಭಾಗವಾಗಿ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಭೇಟಿಯಾಗುತ್ತಿದ್ದಾರೆ.
ಭಾರತ ಮತ್ತು ಪಾಕಿಸ್ತಾನಗಳು ನೆರೆಯ ಹೊರೆಯ ರಾಷ್ಟ್ರಗಳು ಪರಸ್ಪರ ಹಿತಾಸಕ್ತಿಗಳಿಗಾಗಿ ಶಾಂತಿ-ಸೌಹಾರ್ದದಿಂದ ಬದುಕಲೇಬೇಕಾದ ಅನಿವಾರ್ಯತೆಯಿದೆ.
ಎರಡೂ ದೇಶಗಳು ಶಾಂತಿ-ಸಂಧಾನದ ದಿಸೆಯಲ್ಲಿ ಮುಂದುವರಿಯಬೇಕು. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಒಮ್ಮತಕ್ಕೆ ಬರಬೇಕು ಎಂದು ಚೀನೀ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ.
ಜೈಷೆ ಮುಖ್ಯಸ್ಥ ಅಜರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ನಿರ್ಣಯಕ್ಕೆ ತಾಂತ್ರಿಕ ಕಾರಣಗಳಿಂದ ತಡೆಯೊಡ್ಡಲಾಗಿದೆ. ಸಂಧಾನಕ್ಕೆ ಮತ್ತಷ್ಟು ಕಾಲಾವಕಾಶ ನೀಡುವ ಉದ್ದೇಶವಷ್ಟೆ ಇದರ ಹಿಂದಿದೆ ಎಂದು ಚೀನಾ ಹೇಳಿದೆ.
China, Pakistan Foreign Ministers to meet in Beijing