ಕರ್ನಾಟಕದತ್ತ ನೆಟ್ಟಿದೆ ಚುನಾವಣಾ ಆಯೋಗದ ಕಣ್ಣು..!

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಗಳು ಸೇರಿದಂತೆ ಅಭ್ಯರ್ಥಿಗಳು ಸಿದ್ಧರಾಗುತ್ತಿದ್ದಾರೆ. ಇತ್ತ ಶಾಂತಿಯತವಾಗಿ ಎಲೆಕ್ಷನ್ ನಡೆಸಲು ಚುನಾವಣಾ ಆಯೋಗ ಸಹ ತನ್ನ ತಂಡಗಳೊಂದಿಗೆ ಈಗಾಗಲೇ ರಣರಂಗಕ್ಕೆ ಇಳಿದಿದೆ. ದೇಶದ 110 ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಯಲಿದೆ ಎಂಬ ಮಾಹಿತಿ ಚುನಾವಣಾ ಆಯೋಗಕ್ಕೆ ಲಭ್ಯವಾಗಿದ್ದು, ನಮ್ಮ ಕರ್ನಾಟಕ ಸಹ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ.

ಹಣದ ಹೊಳೆ ಹರಿಯುವ ಕ್ಷೇತ್ರಗಳ ಸಂಖ್ಯೆ 110 ರಿಂದ 150 ಏರಿಕೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಹದ್ದಿನ ಕಣ್ಣು ಇಟ್ಟಿದೆ. ಕರ್ನಾಟಕದ ಬರೋಬ್ಬರಿ 12 ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಯಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಮೊದಲ ಮೂರು ಸ್ಥಾನದಲ್ಲಿ ಮಂಡ್ಯ, ಹಾಸನ, ಮೈಸೂರು ಲೋಕಸಭಾ ಕ್ಷೇತ್ರಗಳಿವೆ. ಬೆಂಗಳೂರು ಉತ್ತರ, ತುಮಕೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಬೀದರ್ ಲೋಕಸಭಾ ಕ್ಷೇತ್ರಗಳು ಚುನಾವಣಾ ಆಯೋಗದ ಪಟ್ಟಿಯಲ್ಲಿವೆ. ಈ ಸಂಬಂಧ ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ಹೆಚ್ಚು ಸ್ಕ್ವಾಡ್ ಮತ್ತು ಮನಿ ಕಮಾಂಡೋಗಳನ್ನು ನೇಮಕ ಮಾಡಲಾಗುತ್ತಿದೆ.

ಈಗಾಗಲೇ 28 ಲೋಕಸಭಾ ವ್ಯಾಪ್ತಿಯ 224 ಕ್ಷೇತ್ರಗಳಲ್ಲಿ ಒಬ್ಬೊಬ್ಬ ಅಧಿಕಾರಿ ನೇಮಕವಾಗಿದ್ದಾರೆ. ಅದರಲ್ಲೂ ಸ್ಟಾರ್ ಕ್ಷೇತ್ರಗಳಲ್ಲಿ ಅಧಿಕಾರಿಗಳು ತೀವ್ರ ನಿಗಾ ವಹಿಸಲಿದ್ದಾರೆ. ಮಂಡ್ಯ, ಹಾಸನ, ಕಲಬುರಗಿ, ಬೆಂಗಳೂರು ಉತ್ತರ ಸೇರಿದಂತೆ ಸ್ಟಾರ್ ಕ್ಷೇತ್ರಗಳಿಗೆ ಮನಿ ಕಮಾಂಡೋ ಪಡೆ ಎಚ್ಚರಿಕೆಯಿಂದ ಕಾರ್ಯವಹಿಸಲಿದೆ. ಮಂಡ್ಯ ಒಂದು ಜಿಲ್ಲೆಗೇನೆ ಸುಮಾರು 16 ಮಂದಿ ಮನಿ ಕಮಾಂಡೋಗಳನ್ನ ನೇಮಕ ಮಾಡಲಾಗಿದೆ. ಹಾಗೆಯೇ ಬೆಂಗಳೂರು ನಗರದಲ್ಲೇ 35ಕ್ಕೂ ಹೆಚ್ಚಿನ ಮನಿ ಕಮಾಂಡೋ ಟೀಂ ಬೀಡುಬಿಟ್ಟಿದೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಮನಿ ಕಮಾಂಡೋ ಪಡೆ ಹದ್ದಿನ ಕಣ್ಣು ಇಡಲು ಸಿದ್ಧರಾಗಿದ್ದಾರೆ. 224 ಕ್ಷೇತ್ರಗಳಲ್ಲಿ 250 ಐಟಿ ಅಧಿಕಾರಿಗಳ ತಂಡ ಬಂದಿಳಿದಿದ್ದಾರೆ. ಇವರು ಅಕ್ರಮ ಹಣ ಸಾಗಾಣಿಕೆ, ಅಕ್ರಮ ಹಣ ಸಂಗ್ರಹದ ಮೇಲೆ ತೀವ್ರ ನಿಗಾ ವಹಿಸಲು ಪ್ಲಾನ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ