ಬೆಂಗಳೂರು: ಲೋಕಸಭಾ ಚುನಾವಣೆಯ ಹೊತ್ತಲ್ಲೇ ಕರ್ನಾಟಕದಲ್ಲಿ ಅತೀ ದೊಡ್ಡ ಐಟಿ ದಾಳಿ ನಡೆದಿದ್ದು, ಖಾಸಗಿ ಹೋಟೆಲ್ನಲ್ಲಿ ಕೂಡಿಟ್ಟಿದ್ದ ಬರೋಬ್ಬರಿ 2 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ಗಾಂಧಿನಗರದ ರಾಜಮಹಲ್ ಹೋಟೆಲ್ನಲ್ಲಿ ಐಟಿ ರೇಡ್ ಆಗಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ. ಪಾಟೀಲ್ಗೆ ಆದಾಯ ತೆರಿಗೆ ಇಲಾಖೆಯವರು ಶಾಕ್ ಕೊಟ್ಟಿದ್ದಾರೆ. ಆರ್ ಡಿಪಿಆರ್ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣಗೌಡ ಬಿ ಪಾಟೀಲ್, ರಾಜಮಹಲ್ ಹೋಟೆಲ್ ನಲ್ಲಿ ಮೂರು ರೂಮ್ ಬುಕ್ ಮಾಡಿದ್ದರು.
ಐಟಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಹೋಟೆಲ್ ಮೇಲೆ ದಾಳಿ ಮಾಡಿದ್ದಾರೆ. ಆಗ ಕೊಠಡಿ ಸಂಖ್ಯೆ 104, 105, 115ರಲ್ಲಿ ಕೋಟಿ ಕೋಟಿ ಹಣ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಐಟಿ ದಾಳಿಯಾಗುತ್ತಿದ್ದಂತೆ ನಾರಾಯಣಗೌಡ ಬಿ ಪಾಟೀಲ್ ಪರಾರಿಯಾಗಿದ್ದಾರೆ. 500 ಮತ್ತು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ.
ನಾರಾಯಣಗೌಡ ಹಾವೇರಿಯಲ್ಲಿ ಕಳೆದ ಮೂರು-ನಾಲ್ಕು ವರ್ಷಗಳಿಂದ ಗ್ರಾಮೀಣಾಭಿವೃದ್ದಿ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆಲಸ ಮಾಡುತ್ತಿದ್ದರು. ಹಾವೇರಿಯಲ್ಲೂ ಮೂರು ಮನೆಯನ್ನು ಕಟ್ಟಿಸಿದ್ದಾರೆ. ಇವರು ಬೆಂಗಳೂರಿಗೆ ಹಣ ಸಾಗಾಟ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿತ್ತು.
ಬೆಂಗಳೂರು ಗಾಂಧಿನಗರದಲ್ಲಿದ್ದ ರಾಜಮಹಲ್ ಹೋಟೆಲಿನಲ್ಲಿ ಮೂರು ರೂಂ ಬುಕ್ ಮಾಡಿದ್ದು, ನಾರಾಯಣಗೌಡ ತನ್ನ ಕಾರಿನ ಮೂಲಕ ಹಣವನ್ನು ತಂದು ಸಂಗ್ರಹಿಸಿಟ್ಟಿದ್ದರು. ಸದ್ಯಕ್ಕೆ ನಾರಾಯಗೌಡ ಪರಾರಿಯಾಗಿದ್ದು, ಐಟಿ ಅಧಿಕಾರಿಗಳು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.