ನ್ಯೂಜಿಲ್ಯಾಂಡ್‌ನ ಮಸೀದಿಯಲ್ಲಿ ಶೂಟೌಟ್: ಬಾಂಗ್ಲಾ ಕ್ರಿಕೆಟ್ ಪ್ರವಾಸ ರದ್ದು

ಕ್ರೈಸ್ಟ್​​​ಚರ್ಚ್: ನ್ಯೂಜಿಲ್ಯಾಂಡ್‌ನ ಕ್ರೈಸ್ಟ್​​​ಚರ್ಚ್ ನಗರದಲ್ಲಿ ಶುಕ್ರವಾರ ಬೆಳಗ್ಗೆ ಗುಂಡಿನ ದಾಳಿ ನಡೆದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್-ಬಾಂಗ್ಲಾದೇಶದ ನಡುವೆ ನಡೆಯಬೇಕಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.

ಘಟನೆಯ ಗಂಭೀರತೆಯನ್ನು ಗಮನಿಸಿ, ಶನಿವಾರ (ಮಾರ್ಚ್ 16)ದಿಂದ ಆರಂಭವಾಗಬೇಕಿದ್ದ ನ್ಯೂಜಿಲೆಂಡ್-ಬಾಂಗ್ಲಾದೇಶದ ನಡುವಣ ಮೂರನೇ ಟೆಸ್ಟ್ ಪಂದ್ಯ ಮತ್ತು ಸರಣಿಯನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ (NZC) ರದ್ದುಗೊಳಿಸಿತು.

ಇಲ್ಲಿನ ಹೆಗ್ಲಿ ಪಾರ್ಕ್ ಪ್ರದೇಶದಲ್ಲಿ ಮಸೀದಿಯ ಮೇಲೆ ಈ ದಾಳಿ ನಡೆದಿದ್ದು, ಘಟನೆಯಲ್ಲಿ 27ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬಂದೂಕು ಧಾರಿಯೋರ್ವ ಆಟೋಮ್ಯಾಟಿಕ್ ಮಷಿನ್ ಗನ್ ಮೂಲಕ ಗುಂಡಿನ ದಾಳಿ ನಡೆಸಿದ್ದು, ಬಾಂಗ್ಲಾದೇಶ ಕ್ರಿಕೆಟಿಗರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಬಾಂಗ್ಲಾದ ಬಹುತೇಕ ಕ್ರಿಕೆಟಿಗರು ಪ್ರಾರ್ಥನೆ ಸಲ್ಲಿಸಲು ಹಗ್ಲೆ ಪಾರ್ಕ್ ಮಸೀದಿಗೆ ತೆರಳಿದ್ದರು ಎಂದು ಬಾಂಗ್ಲಾದ ಕ್ರಿಕೆಟ್ ವಕ್ತಾರ ಜಲಾಲ್ ಯೂನಸ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕ್ರಿಕೆಟರ್ ತಮಿಂ ಇಕ್ಬಾಲ್ ಖಾನ್, “ಸಂಪೂರ್ಣ ತಂಡ ಶೂಟರ್ ದಾಳಿಯಲ್ಲಿ ಬಚಾವ್ ಆಗಿದೆ!!! ಇದೊಂದು ಭಯಾನಕ ಅನುಭವ, ದಯವಿಟ್ಟು ನಮಗಾಗಿ ಪ್ರಾರ್ಥಿಸಿ”‘ ಎಂದಿದ್ದಾರೆ.

ಮತ್ತೋರ್ವ ಆಟಗಾರ ಮುಷ್ಫಿಕುರ್ ರಹೀಮ್, “ಅಲ್ಹಮ್ದುಲಿಲ್ಲಾ ಅಲ್ಲಾ ಇಂದು ಕ್ರೈಸ್ಟ್​​​ಚರ್ಚ್ ಮಸೀದಿಯಲ್ಲಿ ಸಂಭವಿಸಿದ ಶೂಟೌಟ್ ನಲ್ಲಿ ನಮ್ಮನ್ನು ರಕ್ಷಿಸಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ನ್ಯೂಜಿಲೆಂಡ್ ಪ್ರಧಾನಿ ಜಾಕಿಂಡಾ ಆರ್ಡೆರ್ನ್ ಈ ದಾಳಿಯನ್ನು ಖಂಡಿಸಿದ್ದು, ಇದೊಂದು ಕರಾಳ ದಿನ ಎಂದು ಘೋಷಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ