ನ್ಯೂಜಿಲೆಂಡ್​ ಶೂಟೌಟ್​: 40 ಮಂದಿ ಸಾವು, ಮೂವರನ್ನು ಬಂಧಿಸಿದ ಪೊಲೀಸರು; ಉಗ್ರ ಕೃತ್ಯ ಎಂದ ಪಿಎಂ ಜಸಿಂಡಾ

ವೆಲ್ಲಿಂಗ್ಟನ್ ​: ನ್ಯೂಜಿಲೆಂಡ್ ಕ್ರೈಸ್ಟ್​​ಚರ್ಚ್​ನ ಎರಡು ಮಸೀದಿಗಳ ಮೇಲೆ ಶುಕ್ರವಾರ ಮಧ್ಯಾಹ್ನ (ಸ್ಥಳೀಯ ಕಾಲಮಾನ) ನಡೆದ ಶೂಟೌಟ್​ನಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ದಾಳಿ ವೇಳೆ ಸ್ಥಳದಲ್ಲಿದ್ದ ಬಾಂಗ್ಲಾ ಕ್ರಿಕೆಟ್​ ತಂಡದ ಆಟಗಾರರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಮೂಲದ ವ್ಯಕ್ತಿ ಈ ದಾಳಿ ನಡೆಸಿದ್ದಾನೆ. ಈತ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಸೀದಿಗೆ ಪ್ರಾರ್ಥನೆಗೆ ಬಂದ ಸಂದರ್ಭದಲ್ಲಿ ಈ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಈ ಕೃತ್ಯವೆಸಗುವುದಕ್ಕೋಸ್ಕರವೇ ಆತ ತರಬೇತಿ ಪಡೆದು ನ್ಯೂಜಿಲೆಂಡ್​ಗೆ ಬಂದಿದ್ದ.

ಅಲ್​ ನೂರ್​ ಮಸೀದಿಯಲ್ಲಿ 30 ಮಂದಿ ಹಾಗೂ ಲಿನ್​ವೂಡ್​ ಮಸೀದಿಯಲ್ಲಿ 10 ಜನರು ಮೃತಪಟ್ಟಿದ್ದಾರೆ.  ಈ ಕೃತ್ಯವನ್ನು ಖಂಡಿಸಿರುವ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡನ್​, “ಈ ದಾಳಿಯನ್ನು ನಾವು ಖಂಡಿಸುತ್ತೇವೆ. ದಾಳಿಯಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ. ಇದನ್ನು ಉಗ್ರರ ದಾಳಿ ಎಂದು ನಾವು ಕರೆಯುತ್ತೇವೆ” ಎಂದಿದ್ದಾರೆ.

ಹ್ಯಾಗ್ಲೆ ಪಾರ್ಕ್​ ಸಮೀಪ ಇದ್ದ ಮಸೀದಿ ಬಳಿ ಬಾಂಗ್ಲಾ ಕ್ರಿಕೆಟ್​ ತಂಡ ತೆರಳಿತ್ತು. ಗುಂಡಿನ ದಾಳಿ ನಡೆದ ನಂತರ ಎಲ್ಲ ಆಟಗಾರರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಬಾಂಗ್ಲಾ ದೇಶದ ಪತ್ರಕರ್ತ ಮೊಹ್ಮದ್​ ಇಸ್ಲಾಮ್​ ಟ್ವೀಟ್ ಮಾಡಿದ್ದಾರೆ. ದೇವರು ನಮ್ಮನ್ನು ರಕ್ಷಿಸಿದ್ದಾನೆ ಎಂದು ಆಟಗಾರರು ಟ್ವೀಟ್​ ಮಾಡಿಕೊಂಡಿದ್ದಾರೆ.

ಸದ್ಯ ಪೊಲೀಸ್​ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕ್ರಿಕೆಟ್​ ಆಟಗಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆದಿದೆಯೇ ಎನ್ನುವ ಅನುಮಾನ ಕಾಡಿದೆ. ದಾಳಿಗೆ ಸಾಕಷ್ಟು ಮಂದಿ ಖಂಡನೆ ವ್ಯಕ್ತವಾಗಿದೆ.

ನ್ಯೂಜಿಲೆಂಡ್​ ಕ್ರೈಸ್ಟ್​​​ಚರ್ಚ್​ನ ಮಸೀದಿ ಮೇಲೆ ನಡೆದ ಗುಂಡಿನ ದಾಳಿ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್​-ಬಾಂಗ್ಲದೇಶ ನಡುವೆ ಇಂದು ನಡೆಯಬೇಕಿದ್ದ ಮೂರನೇ ​ ಟೆಸ್ಟ್​ ಪಂದ್ಯವನ್ನು ರದ್ದು ಮಾಡಲಾಗಿದೆ. ಪಂದ್ಯ ರದ್ದಾದ ಬಗ್ಗೆ ಟ್ವೀಟ್​ ಮಾಡಿರುವ ನ್ಯೂಜಿಲೆಂಡ್ ತಂಡ, “ನ್ಯೂಜಿಲೆಂಡ್​ ಹಾಗೂ ಬಾಂಗ್ಲಾ ನಡುವೆ ನಡೆಯಬೇಕಿದ್ದ ಮೂರನೇ ಪಂದ್ಯವನ್ನು ರದ್ದು ಮಾಡಲಾಗಿದೆ. ಎರಡೂ ರಾಷ್ಟ್ರಗಳು ಒಟ್ಟಾಗಿ ಈ ನಿರ್ಧಾರಕ್ಕೆ ಬಂದಿವೆ. ಈ ದಾಳಿಯಿಂದ ಹಾನಿಗೊಳಗಾದವರ ಬಗ್ಗೆ ನಾವು ಮರುಕ ವ್ಯಕ್ತಪಡಿಸುತ್ತೇವೆ,” ಎಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ