ನಡೆದಾಡೋ ದೇವರು ಶಿವೈಕ್ಯರಾಗಿ ಇಂದಿಗೆ 11 ದಿನ: ಮಠದಲ್ಲಿಂದು ಶ್ರೀಗಳ ಪುಣ್ಯಾರಾಧನೆ

ತುಮಕೂರು: ನಡೆದಾಡುವ ದೇವರು, ಕೋಟಿ ಕೋಟಿ ಭಕ್ತರ ಪ್ರತ್ಯಕ್ಷ ದೇವರಾಗಿದ್ದ, ಲಕ್ಷ ಲಕ್ಷ ಮಂದಿಗೆ ಬದುಕು ಕಟ್ಟಿಕೊಟ್ಟಿದ್ದ ಶ್ರೀಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾಗಿ ಇಂದಿಗೆ 11 ದಿನವಾಗಿದೆ. ಹೀಗಾಗಿ ಇಂದು ಶ್ರೀಗಳ ಪುಣ್ಯಾರಾಧನೆ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

ತಳಿರು ತೋರಣ, ಬಣ್ಣ ಬಣ್ಣದ ಹೂಗಳಿಂದ ಪರಮಪೂಜ್ಯರ ಮಠ ಅಲಂಕೃತಗೊಂಡಿದೆ. ಇಂದಿನ ಪುಣ್ಯಾರಾಧನೆಯಲ್ಲಿ ಬರೋಬ್ಬರಿ 5 ಲಕ್ಷ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ. ದೇಶದ ಮೂಲೆ ಮೂಲೆಗಳಿಂದ ಶ್ರೀಗಳ ಭಕ್ತರು ಶ್ರೀ ಮಠಕ್ಕೆ ಆಗಮಿಸ್ತಿದ್ದಾರೆ. ಕಳೆದ ರಾತ್ರಿಯೇ ಲಕ್ಷಾಂತರ ಮಂದಿ ಭಕ್ತರು ಆಗಮಿಸಿದ್ದು, ಕೆಲವರು ರಾತ್ರಿಯಿಡಿ ಭಜನೆಯಲ್ಲಿ ತೊಡಗಿದ್ದರೆ, ಇನ್ನೂ ಕೆಲವರು ಆವರಣದಲ್ಲೇ ನಿದ್ದೆಗೆ ಜಾರಿದ್ದರು.

ಸ್ವಾಮೀಜಿಯವರ 11ನೇ ದಿನದ ವಿಧಿವಿಧಾನಗಳು ಗದ್ದುಗೆಯಲ್ಲಿ ಇಂದು ನಸುಕಿನ ಜಾವದಿಂದಲೇ ನೆರವೇರುತ್ತಿವೆ. ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರುತ್ತಿವೆ. ಶ್ರೀಗಳ ಕ್ರಿಯಾ ಸಮಾಧಿ ನಡೆದ ಗದ್ದುಗೆಯನ್ನು ಈಗಾಗಲೇ ಬಣ್ಣ-ಬಣ್ಣದ ಹೂಗಳಿಂದ ಅಲಂಕರಿಸಲಾಗಿದೆ. ಭಕ್ತರು ನಿರಂತರವಾಗಿ ಆಗಮಿಸಿ, ಗದ್ದುಗೆಗೆ ಪೂಜೆ ಸಲ್ಲಿಸುತ್ತಾ ಇದ್ದಾರೆ. ಶ್ರೀಗಳ ಭಾವಚಿತ್ರವನ್ನು ಮಠದಲ್ಲಿ ಮೆರವಣಿಗೆ ಮಾಡಲಿದ್ದು, ಇದಕ್ಕಾಗಿ ಬೆಳ್ಳಿರಥವನ್ನು ಶುಚಿಗೊಳಿಸಲಾಗಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ಪುಣ್ಯಾರಾಧನೆಗೆ ಆಗಮಿಸುವ 5 ಲಕ್ಷ ಭಕ್ತರಿಗಾಗಿ ನಿರಂತರವಾಗಿ ವಿವಿಧ ರೀತಿಯ ಪ್ರಸಾದವನ್ನು ತಯಾರಿಸಲಾಗುತ್ತಿದೆ. ಮಠದ ಅವರಣದಲ್ಲಿ ವಿವಿಧ ರೀತಿಯ ಪ್ರಸಾದವನ್ನು ಸಿದ್ಧ ಮಾಡುತ್ತಿದ್ದಾರೆ. ನೂರಾರು ಭಕ್ತರು ಸ್ವಯಂ ಪ್ರೇತಿತವಾಗಿ ದಾಸೋಹದ ಸಿದ್ಧತಾ ಕಾರ್ಯದಲ್ಲಿ ರಾತ್ರಿಯಿಡಿ ತೊಡಗಿಕೊಂಡಿದ್ದರು. ಈಗಾಗಲೇ 69 ಕ್ವಿಂಟಾಲ್ ಸಿಹಿ ಬೂಂದಿ ತಯಾರಿಸಲಾಗಿದೆ.

ತ್ರಿವಿಧ ದಾಸೋಹಿಯ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ಬೆಳಗ್ಗೆ 10.30ಕ್ಕೆ ಚಾಲನೆ ಸಿಗಲಿದ್ದು, ಶ್ರೀಗಳ ಲಿಂಗ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದ್ದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿಯೇ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಇಂದಿನ ಪುಣ್ಯಾರಾಧನೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಸುತ್ತೂರು ಶ್ರೀಗಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ವೇದಿಕೆ ಮುಂಭಾಗ ಸುಮಾರು 10 ಸಾವಿರ ಭಕ್ತರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಇನ್ನು ಮಠದ ವಿದ್ಯಾರ್ಥಿಗಳಿಗೆ ಶ್ರೀಗಳ ಭಾವಚಿತ್ರವಿರುವ ಟಿ ಶರ್ಟ್ ಹಾಗೂ ಪಂಚೆ ನೀಡಲಾಗಿದೆ.

ಶ್ರೀಗಳ ಪ್ರತಿಮೆ:
ಶ್ರೀಗಳ ಕಂಚಿಮೆ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ಮೊನ್ನೆಯವರೆಗೂ ಗೊಂದಲ ಇತ್ತು. ಆದರೆ ಬುಧವಾರ ಎಲ್ಲಾ ಗೊಂದಲ ಪರಿಹಾರವಾಗಿದೆ. ಶ್ರೀ ಮಠದ ಪಾರ್ಕ್ ನಲ್ಲಿ ಆಳೇತ್ತರದಲ್ಲಿ ಶ್ರೀಗಳ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಿರ್ಧಾರ ಮಾಡಲಾಗಿದೆ. 10 ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದ ಬರೋಬ್ಬರಿ 300 ಕೆಜಿ ತೂಕದ, 5.6 ಅಡಿ ಎತ್ತರ ಶ್ರೀಗಳ ಕಂಚಿನ ಪ್ರತಿಮೆಯನ್ನು ಇದೀಗ ಗೋಸಲ ಸಿದ್ದೇಶ್ವರ ವೇದಿಕೆಗೆ ತಂದು ಇರಿಸಲಾಗಿದ್ದು, ಪುಣ್ಯಾರಾಧನೆ ವೇಳೆ ಇಂದು ಲೋಕಾರ್ಪಣೆಗೊಳ್ಳಲಿದೆ. ಪಾರ್ಕ್ ನ ಮಂಟಪದಲ್ಲಿ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಅಂದ ಹಾಗೇ, ಇದನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಈ ಕಂಚಿನ ಪ್ರತಿಮೆಯನ್ನು 10 ವರ್ಷಗಳ ಹಿಂದೆಯೇ ರೆಡಿ ಮಾಡಿಸಿದ್ದರು. ಆದರೆ ಪ್ರತಿಮೆ ಸ್ಥಾಪಿಸಲು ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದ ಕಾರಣದಿಂದ ಅದನ್ನು ಎಸ್‍ಐಟಿ ಕಾಲೇಜಿನ ಗೋಡಾನ್‍ನಲ್ಲಿ ಇರಿಸಲಾಗಿತ್ತು. ಇದೀಗ ಅದನ್ನು ಮಠಕ್ಕೆ ತರಲಾಗಿದೆ.

ಬಿಗಿ ಬಂದೋಬಸ್ತ್ : ಪುಣ್ಯಾರಾಧನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬುಧವಾರವೇ ಮಠಕ್ಕೆ ಬಂದಿರುವ ದಕ್ಷಿಣ ವಲಯ ಐಜಿಪಿ ದಯಾನಂದ್, ಭದ್ರತೆಯ ಉಸ್ತುವಾರಿ ವಹಿಸಿದ್ದು, ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಲಕ್ಷ ಲಕ್ಷ ಭಕ್ತರು ಮಠಕ್ಕೆ ಧಾವಿಸಲಿರುವ ಹಿನ್ನೆಲೆಯಲ್ಲಿ ಕೆಲ ಮಾರ್ಗ ಬದಲಾವಣೆಯನ್ನು ಪೊಲೀಸ್ ಮಾಡಿದೆ. ಎನ್‍ಹೆಚ್ 4ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ಗೂಡ್ಸ್ ವಾಹನಗಳ ಸಂಚಾರ ನಿರ್ಬಂಧಿಸಲಾಗುತ್ತದೆ.

ದಾವಣಗೆರೆ ಚಿತ್ರದುರ್ಗದ ಕಡೆಯಿಂದ ಬರುವ ಗೂಡ್ಸ್ ವಾಹನಗಳಿಗೆ ಶಿರಾ, ಮಧುಗಿರಿ ಕೊರಟಗೆರೆ, ದಾಬಸ್ ಪೇಟೆ ಮೂಲಕ ಬೆಂಗಳೂರಿಗೆ ತೆರಳಲು ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಬೆಂಗಳೂರಿನಿಂದ ದಾವಣಗೆರೆಯತ್ತ ಹೋಗುವ ಗೂಡ್ಸ್ ವಾಹನಗಳಿಗೆ ದಾಬಸ್‍ಪೇಟೆ, ಕೊರಟಗೆರೆ, ಮಧುಗಿರಿ ಮೂಲಕ ಶಿರಾಗೆ ಸಂಪರ್ಕ ಕಲ್ಪಿಸಲಾಗಿದೆ. ಉಳಿದಂತೆ ಬಸ್, ಕಾರುಗಳಿಗೆ ಸಂಚಾರಕ್ಕೆ ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ