ಶಸ್ತ್ರ ಚಿಕಿತ್ಸೆ ಮಾಡಿರುವ ಕಡೆ ಸ್ವಲ್ಪ ನೋವಿದ್ದು, ಶ್ರೀಗಳಿಗೆ ಜ್ವರ ಬಂದಿದೆ: ಸಿದ್ದಗಂಗಾ ಮಠದ ಕಿರಿಯ ಶ್ರೀ

ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡಿದೆ ಎಂದು ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಶ್ರೀಗಳು ವಿಶ್ರಾಂತಿಯಿಂದ ಎದ್ದು ನಿತ್ಯಕಾಯಕ ಆರಂಭಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ಸ್ವಲ್ಪ ನೋವಿದೆ ಹಾಗಾಗಿ ಜ್ವರ ಕಾಣಿಸಿಕೊಂಡಿತ್ತು. ಈಗ ಜ್ವರ ಕಡಿಮೆಯಾಗಿದ್ದು ಭಕ್ತಾಧಿಗಳು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

ಶ್ರೀಗಳಿಗೆ ಸ್ವಲ್ಪ ನಿಶ್ಯಕ್ತಿ ಇದ್ದು ಅದಕ್ಕೆ ಸಂಬಂಧಿಸಿದ ಔಷಧಿ ನೀಡಲಾಗುತ್ತಿದೆ. ಅಲ್ಲದೆ ಮಠದಲ್ಲಿಯೇ ಶ್ರೀಗಳಿಗೆ ಚಿಕಿತ್ಸೆ ಮುಂದುವರಿಯಲಿದ್ದು ಬೇರೆ ಎಲ್ಲೂ ಶಿಫ್ಟ್ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಕಳೆದ 13 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಗಂಗಾ ಶ್ರೀಗಳು ಗುಣಮುಖರಾಗಿ ಬುಧವಾರ ಶ್ರೀಮಠಕ್ಕೆ ವಾಪಸ್ಸಾಗಿದ್ದರು. ಗುರುವಾರ ಮುಂಜಾನೆಯೇ ವಿಶ್ರಾಂತಿಯಿಂದ ಇದ್ದ ಶ್ರೀಗಳು ಸ್ನಾನ ಮುಗಿಸಿ ಬಳಿಕ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿದ್ದರು. ಎಂದಿನಂತೆ ಶ್ರೀಗಳು ಇಡ್ಲಿ, ಹಣ್ಣು ಹಂಪಲನ್ನು ಸೇವಿಸಿದ್ದು, ಸಿದ್ದಗಂಗಾ ಆಸ್ಪತ್ರೆ ವೈದ್ಯರು ಶ್ರಿಗಳ ಆರೋಗ್ಯದ ಮೇಲೆ ನಿಗಾವಹಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿಯೇ ಶ್ರೀಗಳಿಗೆ ಇನ್ನೂ ಕೆಲದಿನಗಳ ವಿಶ್ರಾಂತಿ ಅವಶ್ಯಕತೆ ಇದ್ದರೂ ಶ್ರಿಗಳು ಮಠ ಹಾಗೂ ವಿದ್ಯಾರ್ಥಿಗಳನ್ನು ನೋಡುವ ಹಂಬಲ ವ್ಯಕ್ತಪಡಿಸಿದ್ದರು. ಹಾಗಾಗಿ ತುರ್ತಾಗಿ ಶ್ರೀಮಠಕ್ಕೆ ಕರೆದುಕೊಂಡು ಬರಲಾಗಿತ್ತು. ಸಿದ್ದಗಂಗಾ ಶ್ರೀಗಳನ್ನು ಕರೆದುಕೊಂಡು ಬರಲು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದ್ದರಿಂದ ಯಾವುದೇ ತೊಂದರೆ ಇಲ್ಲದೇ ಶ್ರೀಗಳು ಶ್ರೀಮಠಕ್ಕೆ ಬಂದು ತಲುಪಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ