ನಡೆದಾಡುವ ದೇವರ ಆರೋಗ್ಯ ತೀವ್ರ ಗಂಭೀರ: ಸಿದ್ಧಗಂಗಾ ಮಠದತ್ತ ಹರಿದುಬರುತ್ತಿದೆ ಭಕ್ತ ಸಮೂಹ

ತುಮಕೂರುನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಆರೋಗ್ಯ ಇನ್ನಷ್ಟು ಗಂಭಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದ ಸುತ್ತಮುತ್ತ ಬಿಗಿ ಪೊಲೀಸ್​ ಬಂದೋಬಸ್ತ್​ ವಹಿಸಲಾಗಿದ್ದು, ಬೆಳಗ್ಗೆಯಿಂದಲೇ ಭಕ್ತಸಾಗರ ಹರಿದುಬರುತ್ತಿದೆ.

ಇಂದು ಬೆಳಿಗ್ಗೆಯೇ ಶ್ರೀಗಳ ಉಸಿರಾಟದಲ್ಲಿ ಸ್ವಲ್ಪ ಏರುಪೇರು ಕಂಡಿತ್ತು. ಹೀಗಾಗಿ, ಸಿದ್ದಗಂಗಾ ಆಸ್ಪತ್ರೆ ವೈದ್ಯ ಡಾ. ಪರಮೇಶ್ ತಂಡದಿಂದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಮುನ್ನೆಚ್ಚರಿಕಾ ಕ್ರಮವಾಗಿ ಸಿದ್ದಗಂಗಾ ಮಠದ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಈಗಾಗಲೇ ಐಜಿಪಿ ನೀಲಮಣಿರಾಜು ಆದೇಶದಂತೆ ಭದ್ರತೆ ಹೆಚ್ಚಿಸಲಾಗಿದ್ದು, ಮೊದಲ ಹಂತದಲ್ಲಿ 2 ಸಾವಿರ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.

1500 ಗೃಹ ರಕ್ಷಕದಳ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಲಾಗಿದೆ. ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲು ಸೂಚಿಸಲಾಗಿದೆ.

ಮಠದ ಆವರಣದಲ್ಲೇ ಪೊಲೀಸ್ ಕಂಟ್ರೋಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಸ್ಕೃತ ಕಾಲೇಜಿನ 2ನೇ ಮಹಡಿಯಲ್ಲಿ ಕಂಟ್ರೋಲ್ ರೂಂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಐಜಿಪಿ ದಯಾನಂದ್, ಎಸ್ಪಿ ಕೋನವಂಶಿ ಕೃಷ್ಣ, ಎಎಸ್ಪಿ ಡಾ. ಶೋಭಾರಾಣಿ, ಡಿವೈಎಸ್ಪಿ ತಿಪ್ಪೇಸ್ವಾಮಿ, ಪೊಲೀಸ್ ಅಧಿಕಾರಿಗಳು ಕಂಟ್ರೋಲ್​ ರೂಂಗೆ ತೆರಳಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಐಜಿಪಿ ದಯಾನಂದ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದ್ದು, ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಮಠಕ್ಕೆ ಆಗಮಿಸಿದ್ದಾರೆ. ದಯಾನಂದ್ ಜೊತೆ ಕಾರ್ತಿಕ್ ರೆಡ್ಡಿ ನಿರಂತರ ಚರ್ಚೆ ನಡೆಸುತ್ತಿದ್ದು, ಈಗಾಗಲೇ ತುಮಕೂರಿಗೆ 2,000 ಪೊಲೀಸರು ಆಗಮಿಸಿದ್ದಾರೆ.

ಸದ್ಯ 10 ಜಿಲ್ಲೆಗಳ ಎಸ್ಪಿಗಳು ತುಮಕೂರಿಗೆ ಆಗಮಿಸಿದ್ದಾರೆ. ಮೂರೂವರೆ ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮಠದ ಸುತ್ತಮುತ್ತ ಹಾಗೂ ತುಮಕೂರಿನ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ.  ಕೇಂದ್ರ ವಲಯ ಐಜಿಪಿ ದಯಾನಂದ ಅವರು ತುಮಕೂರಿನಲ್ಲೇ ವಾಸ್ತವ್ಯ ಹೂಡಿ ಭದ್ರತೆ ನೋಡಿಕೊಳ್ಳುತ್ತಿದ್ದಾರೆ. ಇಂದು ಗಣ್ಯರು ಮಠಕ್ಕೆ ಬರುವ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಯಾವುದೇ ಸಮಸ್ಯೆಯಾಗದಂತೆ ಖುದ್ಧು ಐಜಿಪಿಯಿಂದಲೇ ಭದ್ರತೆ ಉಸ್ತುವಾರಿ ಪರಿಶೀಲಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ