ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರನ್ನು ಭೇಟಿಯಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪರಿಕ್ಕರ್ ಆರೋಗ್ಯ ವಿಚಾರಿಸಿದರು.
ಇಂದು ಗೋವಾದ ಪರಿಕ್ಕರ್ ನಿವಾಸಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಮುಂಜಾನೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿ ಅವರು ಶೀಘ್ರ ಗುಣಮುಖರಾಗಲು ಶುಭಾಶಯ ಕೋರಿದ್ದೇನೆ. ಇದು ಕೇವಲ ವೈಯಕ್ತಿಕ ಭೇಟಿಯಷ್ಟೇ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯೊಂದಿಗೆ ರಜಾದಿನದ ಅಂಗವಾಗಿ ಜ. 26 ರಿಂದ ಗೋವಾದಲ್ಲಿದ್ದಾರೆ.
ಹಲವು ತಿಂಗಳುಗಳಿಂದಲೂ ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಬಳಲುತ್ತಿರುವ ಮನೋಹರ್ ಪರಿಕ್ಕರ್ ಅವರು ಫೆ. 2018ರಿಂದಲೂ ಗೋವಾ, ಮುಂಬೈ, ದೆಹಲಿ ಮತ್ತು ನ್ಯೂಯಾರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ರಫೇಲ್ ಡೀಲ್ಗೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದಷ್ಟೇ ಟ್ವಿಟ್ ಮಾಡಿದ್ದ ರಾಹುಲ್ ಗಾಂಧಿ, ಪ್ರಕರಣ ಸಂಬಂಧ ಆಡಿಯೊ ಟೇಪ್ ಬಿಡುಗಡೆಯಾಗಿ 30 ದಿನಗಳು ಕಳೆದಿವೆ. ಇದುವರೆಗೂ ಎಫ್ಐಆರ್ ಅಥವಾ ಯಾವುದೇ ತನಿಖೆಗೆ ಆದೇಶಿಸಿಲ್ಲ. ಸಚಿವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಟೇಪ್ಗಳು ಅಧಿಕೃತವೆಂದು ಸ್ಪಷ್ಟವಾಗಿದೆ ಮತ್ತು ಅದು ಗೋವಾ ಮುಖ್ಯಮಂತ್ರಿ ಹಾಗೂ ಪ್ರಧಾನಿ ಕುರಿತ ಸ್ಫೋಟಕ ರಫೇಲ್ ಕುರಿತಾದ ರಹಸ್ಯಗಳನ್ನು ಒಳಗೊಂಡಿದೆ. ಪರಿಕ್ಕರ್ ವಿರುದ್ಧ ತನಿಖೆಯಾಗಬೇಕೆಂದು ಆಗ್ರಹಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ಸ್ವತ: ರಾಹುಲ್ ಗಾಂಧಿ ಪರಿಕ್ಕರ್ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
Rahul Gandhi, meets,Manohar Parrikar