ತೀವ್ರ ಅನಾರೋಗ್ಯದ ನಡುವೆಯೂ ಮೂಗಿಗೆ ಟ್ಯೂಬ್ ಹಾಕಿಕೊಂಡು ನದಿಗಳ ಸೇತುವೆ ಕಾಮಗಾರಿ ಪರಿಶೀಲಿಸಿದ ಗೋವಾ ಸಿಎಂ

ಪಣಜಿ: ಅನರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಬಹುಕಾಲದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಮಾಂಡವಿ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದರು.

ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮನೋಹರ್​ ಪರಿಕ್ಕರ್​ ಹಲವು ತಿಂಗಳುಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಯಾವುದೇ ಸಭೆ, ಕಾರ್ಯಕ್ರಮಗಳಿಗೂ ಹಾಜರಾಗುತ್ತಿರಲಿಲ್ಲ. ಇಂದು ಮೂಗಿಗೆ ನಳಿಕೆ ಹಾಕಿಕೊಂಡಿರುವ ಸ್ಥಿತಿಯಲ್ಲಿಯೇ, ಬೆಂಬಲಿಗರೊಂದಿಗೆ ನಡೆದಾಡುತ್ತ ಅರ್ಧಬಂರ್ಧ ಕಟ್ಟಲಾಗಿರುವ ಮಾಂಡವಿ ನದಿ ಸೇತುವೆ ಹಾಗೂ ಝುರಾರಿ ನದಿ ಸೇತುವೆಯನ್ನು ವೀಕ್ಷಿಸಿದರು. ಆದರೆ, ಇದರ ವಿರುದ್ಧ ಕೂಡ ಪ್ರತಿಪಕ್ಷಗಳು ಕಿಡಿಕಾರಿದ್ದು, ಬಿಜೆಪಿಯದ್ದು ಅಮಾನವೀಯತೆ ಎಂದು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ ಅಕ್ಟೋಬರ್​ 14ರಿಂದಲೂ ಪರಿಕ್ಕರ್​ ತಮ್ಮ ಗೋವಾ ನಿವಾಸದಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮನೆಯಿಂದ ಹೊರಬಂದಿದ್ದು, ಸೇತುವೆ ಪರಿಶೀಲನೆಗಾಗಿ ಪೋರ್ವೋರಿಮ್​ನಿಂದ ಮೆರ್ಸಸ್​ವರೆಗೆ ಸುಮಾರು 6 ಕಿ.ಮೀ. ದೂರ ಸಂಚಾರ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಉತ್ತರ ಗೋವಾದಿಂದ ಪಣಜಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣವನ್ನು ವೀಕ್ಷಿಸಿದ ಪರಿಕ್ಕರ್​ ಅಧಿಕಾರಿಗಳ ಜತೆ ಚರ್ಚಿಸಿದರು. ಈ ವೇಳೆ ಇಬ್ಬರು ವೈದ್ಯರು ಅವರ ಜತೆಗೇ ಇದ್ದರು. ಕಾಯಿಲೆಯಿಂದ ಜರ್ಜರಿತರಾದ ಮನೋಹರ್​ ಪರಿಕ್ಕರ್​ ತುಂಬ ಸಣಕಲಾಗಿದ್ದು, ಅವರಲ್ಲಿ ಅಸ್ವಸ್ಥತೆ ಗೋಚರಿಸುತ್ತಿದೆ.

ಇದನ್ನು ನೋಡಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ ಟ್ವೀಟ್​ ಮಾಡಿದ್ದು, ಪರಿಕ್ಕರ್​ ಅವರಿಗೆ ಮೂಗಿನಿಂದ ಜೀರ್ಣಾಂಗಕ್ಕೆ ನಳಿಕೆ ಹಾಕಲಾಗಿದೆ. ಅಷ್ಟು ಅನಾರೋಗ್ಯವಿದ್ದರೂ ಕೆಲಸದಲ್ಲಿ ಮುಂದುವರಿಯಲು ಅವರ ಮೇಲೆ ಒತ್ತಡ ಹೇರುತ್ತಿರುವುದು, ಆ ಫೋಟೋಗಳನ್ನು ಅಪ್​ಲೋಡ್​ ಮಾಡುತ್ತಿರುವುದು ಮಾನವೀಯತೆ ಅಲ್ಲ. ಯಾವುದೇ ಒತ್ತಡವನ್ನೂ ಅವರ ಮೇಲೆ ಹೇರದೆ ಚೇತರಿಸಿಕೊಳ್ಳಲು ಅವಕಾಶ ಮಾಡಿಕೊಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಗೌರವ್​ ಭಾಟಿಯಾ, ಇದರಲ್ಲಿ ಅಮಾನವೀಯತೆ ಏನು ಬಂತು? ಈ ಫೋಟೋ ಸಾವಿರ ಮಾತುಗಳನ್ನಾಡುತ್ತಿದೆ. ಮನೋಹರ್​ ಪರಿಕ್ಕರ್​ ಅವರ ಕೆಲಸದ ಬದ್ಧತೆಯನ್ನು ತೋರಿಸುತ್ತಿದೆ. ಜನರಿಗೆ ಸೇವೆ ಮಾಡಬೇಕು ಎಂಬ ಭಾವನೆ ಹೃದಯದಿಂದ ಏಳುತ್ತದೆ. ಅದು ನಿಮ್ಮಂತಹವರಿಗೆ ಅರ್ಥವಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Goa CM,Manohar Parrikar,inspected,constructed bridge,Mandovi river,He had a tube in his nose

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ